ಡಬಲ್ ಇಂಜಿನ್ ಸರ್ಕಾರದಿಂದ ದೇಶದಲ್ಲಿ ಅಭಿವೃದ್ಧಿ ಯೋಜನೆಗಳು : ನಳಿನ್ ಕುಮಾರ್
ಹಾರಾಡಿ-ರೈಲ್ವೇ ನಿಲ್ದಾಣ ಸಂಪರ್ಕ ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ

ಪುತ್ತೂರು: ಡಬಲ್ ಇಂಜಿನ್ ಸರಕಾರದಿಂದ ಹಲವಾರು ಅಭಿವೃದ್ಧಿ ಯೋಜನೆಗಳ ಮಹಾಪೂರವೇ ಹರಿದು ಬರುತ್ತಿದ್ದು, ಹಲವಾರು ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತಿವೆ. ದೇಶದಲ್ಲಿ ಪರಿವರ್ತನೆ ಯುಗ ಕಾಣಲಾರಂಭಿಸಿದೆ ಎಂದು ದ.ಕ. ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಬುಧವಾರ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ನಗರದ ಹಾರಾಡಿ-ರೈಲ್ವೇ ನಿಲ್ದಾಣ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿಯ ಶಿಲಾನ್ಯಾಸಕ್ಕೆ ಚಾಲನೆ ನೀಡಿ, ಶಿಲಾನಾಮಫಲಕ ಅನಾವರಣಗೊಳಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 1070 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಡಬಲ್ ಇಂಜಿನ್ ಸರಕಾರದಿಂದ ಮಾತ್ರ ಅಭಿವೃದ್ಧಿ ಕಾಮಗಾರಿ ಆಗುತ್ತಿದೆ. ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 130 ಕೋಟಿ ಜಲಸಿರಿ ಯೋಜನೆ, 25 ಕೋಟಿ ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ರಸ್ತೆ ಅಭಿವೃದ್ಧಿ, 33 ಕೋಟಿ ನಗರೋತ್ಥಾನ ಯೋಜನೆ, 70 ಕೋಟಿ ಜೆಜೆಎಂ ಯೋಜನೆಯ ಕಾಮಗಾರಿಗಳು ನಡೆಯುತ್ತಿದೆ. ಅಲ್ಲದೆ 18 ಎಕ್ರೆ ಜಾಗವನ್ನು ಗುರುತಿಸಲಾಗಿದ್ದು, ಎರಡು ಸಾವಿರ ಬಡವರಿಗೆ ನಿವೇಶನ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. ಬನ್ನೂರಿನಲ್ಲಿ ನ್ಯಾಯಾಲಯ ಕಟ್ಟಡ ಪ್ರಗತಿಯಲ್ಲಿದ್ದು, ಶೀಘ್ರ ಉದ್ಘಾಟನೆಗೊಳ್ಳಲಿದೆ ಎಂದ ಅವರು, ಸ್ವಚ್ಛತೆಯಲ್ಲಿ ನಗರಸಭೆ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ಒಂದನೇ ಸ್ಥಾನಕ್ಕೆ ಬರುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ನಗರಸಭೆ ವತಿಯಿಂದ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪುತ್ತೂರು ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್ ಅವರು ಸುಮಾರು 745 ಮೀಟರ್ ಹಾರಾಡಿ-ರೈಲ್ವೇ ನಿಲ್ದಾಣ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡುವ ಮೂಲಕ ಈ ಭಾಗದ ಸಾರ್ವಜನಿಕರ 40 ವರ್ಷಗಳ ಬೇಡಿಕೆ ಈಡೇರುತ್ತಿದೆ. ರಸ್ತೆ ಕಾಮಗಾರಿಗೆ ರೈಲ್ವೇ ಇಲಾಖೆಯಿಂದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ನಿರಪೇಕ್ಷಣಾ ಪತ್ರ ತೆಗೆಸಿಕೊಟ್ಟಿದ್ದಾರೆ. ಕಾಮಗಾರಿಯು ಅತೀ ಶೀಘ್ರವಾಗಿ ಪೂರ್ಣಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಪಿಎಂ ಸ್ವ ನಿಧಿ ಯೋಜನೆಯಡಿ 192 ಫಲಾನಿಭವಿಗಳಿಗೆ ಗುರುತಿನ ಫಲಕ, ಪ್ರೋತ್ಸಾಹ ಪತ್ರ ವಿತರಣೆ, ಡಾ.ಬಿ.ಆರ್.ಅಂಬೇಡ್ಕರ್ ಯೋನೆಯಡಿ ತಲಾ 2 ಲಕ್ಷದಂತೆ ಹತ್ತು ಮಂದಿ ಫಲಾನುಭವಿಗಳಿಗೆ 20 ಲಕ್ಷ ರೂ., ವಾಜಪೇಯಿ ವಸತಿ ಯೋಜನೆಯಡಿ 1.20 ಲಕ್ಷದಂತೆ 16 ಫಲಾನುಭವಿಗಳಿಗೆ 19.20 ಲಕ್ಷ ರೂ. ಕಾರ್ಯಾದೇಶ ಪತ್ರ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಪ್ರಯುಕ್ತ ನಿರುಪಯುಕ್ತ ಸಾಮಾಗ್ರಿಗಳಿಂದ ಆಟಿಕೆಗಳು ಮತ್ತು ಇತರ ಪ್ರದರ್ಶಕ ಸಾಮಗ್ರಿಗಳನ್ನು ತಯಾರಿಸುವ ಕುರಿತು ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ನೀಡಲಾಯಿತು.
ಪುತ್ತೂರು ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ರಾಜ್ಯ ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ನಗರಸಭೆ ಸದಸ್ಯ ಪದ್ಮನಾಭ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್ ಸ್ವಾಗತಿಸಿದರು. ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.