ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ 60ಲಕ್ಷ ರೂ.ವೆಚ್ಚದಲ್ಲಿ ಸುಸಜ್ಜಿತ ಮನೆ ನಿರ್ಮಿಸಿ ಕೊಡಲಾಗುವುದು: ನಳಿನ್ ಕುಮಾರ್

ಸುಳ್ಯ: ಇತ್ತೀಚೆಗೆ ಹತ್ಯೆಯಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಅವರ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಭೂಮಿ ಪೂಜೆ ನಡೆಯಿತು.
ಪೂರ್ವಾಹ್ನ ಮಂಜೇಶ್ವರ ಭಗವತೀ ದೇವಸ್ಥಾನದ ಪುರೋಹಿತರಾದ ಸುರೇಶ್ ಗುರಿಕಾರ ನೇತೃತ್ವದಲ್ಲಿ ವೈಧಿಕ ವಿಧಿ ವಿಧಾನಗಳು ನಡೆದು ಭೂಮಿ ಪೂಜೆ ನೆರವೇರಿತು. ಪ್ರವೀಣ್ ನೆಟ್ಟಾರು ಅವರ ತಂದೆ ಶೇಖರ ಪೂಜಾರಿ, ತಾಯಿ ರತ್ನಾವತಿ, ಪತ್ನಿ ನೂತನ ಕುಮಾರಿ ಹಾಗು ಕುಟುಂಬ ವರ್ಗ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಳಿನ್ ಕುಮಾರ್ ಕಟೀಲ್ 'ಪ್ರವೀಣ್ ನೆಟ್ಟಾರು ಅವರು ಬಿಜೆಪಿ ಪಕ್ಷಕ್ಕಾಗಿ ಮತ್ತು ಸಂಘಟನೆಗಾಗಿ ದುಡಿದಿದ್ದಾರೆ. ಅವರ ಅಗಲಿಕೆ ಪಕ್ಷಕ್ಕೆ, ಸಂಘಟನೆಗೆ ದೊಡ್ಡ ನಷ್ಟ. ಅವರ ಕುಟುಂಬದ ಜೊತೆಗೆ ಪಕ್ಷ ಇದೆ. ಕುಟುಂಬಕ್ಕೆ ಎಲ್ಲಾ ಸಹಾಯ, ನೆರವು ನೀಡಲು ಬದ್ಧರಾಗಿದ್ದೇವೆ. ಆದರ ಮೊದಲ ಹಂತವಾಗಿ ಮನೆ ನಿರ್ಮಾಣ ಮಾಡಲು ಆರಂಭಿಸಲಾಗಿದೆ. 60 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಹೇಳಿದರು.
ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೈಜಾರಿ, ಪುತ್ತೂರು ಶಾಸಕ ಸಂಜೀವ ಮಠಂದೂರು, ರಾಜ್ಯ ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಕಾರ್ಯದರ್ಶಿ ಮುಳಿಯ ಕೇಶವ ಭಟ್, ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಹರಿಕೃಷ್ಣ ಬಂಟ್ವಾಳ್, ಮುರಳಿಕೃಷ್ಣ ಹಸಂತಡ್ಕ, ದಿನೇಶ್ ಮೆದು, ಜಗದೀಶ್ ಅಧಿಕಾರಿ, ಸುಧಾಕರ ರೈ ಮುಗೆರೋಡಿ, ಸಾಜಾ ರಾಧಾಕೃಷ್ಣ ಆಳ್ವ, ಆರ್.ಕೆ.ಭಟ್ ಕುರುಂಬಡೇಲು, ಕೆ.ಟಿ.ಸುವರ್ಣ, ಮಹೇಶ್ ಕುಮಾರ್ ಮೇನಾಲ, ಸುನಿಲ್ ಕೇರ್ಪಳ, ಆರ್.ಸಿ.ನಾರಾಯಣ ರೆಂಜ, ಗುರುದತ್ ನಾಯಕ್, ಮತ್ತಿತರರು ಉಪಸ್ಥಿತರಿದ್ದರು.