ಹರೇಕಳ-ಅಡ್ಯಾರ್ ಕಿಂಡಿ ಅಣೆಕಟ್ಟು: ನ.9ರಂದು ಕಂದಾಯ, ಸಣ್ಣ ನೀರಾವರಿ ಇಲಾಖೆಯಿಂದ ಜಂಟಿ ಸರ್ವೆ
► ‘ವಾರ್ತಾಭಾರತಿ’ ವರದಿಯ ಫಲಶ್ರುತಿ ► ಮುಳುಗಡೆ ಭೀತಿ ಪ್ರದೇಶದ ಸಂತ್ರಸ್ತರ ಅಹವಾಲು ಸಭೆ

ಮಂಗಳೂರು: ‘ಉಪ್ಪು ನೀರು ತಡೆಯುವ ಕಿಂಡಿ ಅಣೆಕಟ್ಟು’ವಿನಲ್ಲಿ ನಿಗದಿತ ಪ್ರಮಾಣದಲ್ಲಿ ನೀರು ಸಂಗ್ರಹಿಸಿದರೆ ಯಾರಿಗೂ ಮುಳುಗಡೆಯ ಭೀತಿ ಬೇಡ. ನದಿ ತೀರದ ಜನರಿಗೆ ತೊಂದರೆಯಾಗದಂತೆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಾಗುವುದು. ಜಮೀನು ಕಳಕೊಳ್ಳುವ ಸಂತ್ರಸ್ತರಿಗೆ ಜಿಲ್ಲಾಧಿಕಾರಿಯ ನೇತೃತ್ವದ ಸಮಿತಿಯ ವರದಿಯಂತೆ ಸೂಕ್ತ ಪರಿಹಾರಧನ ನೀಡಲಾಗುವುದು. ಮುಳುಗಡೆ ಭೀತಿ ಎದುರಿಸುವ ಪ್ರದೇಶದಲ್ಲಿ ನ.9ರಂದು ಕಂದಾಯ ಮತ್ತು ಸಣ್ಣ ನೀರಾವರಿ ಇಲಾಖೆಯಿಂದ ಜಂಟಿ ಸರ್ವೆ ನಡೆಸಲಾಗುವುದು ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.
ಹರೇಕಳ ಮತ್ತು ಅಡ್ಯಾರ್ ಗ್ರಾಮಗಳ ಮಧ್ಯೆ ಹಾದುಹೋಗುವ ನೇತ್ರಾವತಿ ನದಿಗೆ ಅಡ್ಡವಾಗಿ ನಿರ್ಮಿಸಲಾಗುವ ‘ಉಪ್ಪು ನೀರು ತಡೆಯುವ ಕಿಂಡಿ ಅಣೆಕಟ್ಟು’ವಿನಲ್ಲಿ ನಿಗದಿತ ಪ್ರಮಾಣದಲ್ಲಿ ನೀರು ಸಂಗ್ರಹಿಸಿದರೆ ಮುಳುಗಡೆ ಭೀತಿ ಎದುರಿಸಲಾಗುವ ಪಾವೂರು ಮತ್ತು ಹರೇಕಳ ಗ್ರಾಮಗಳ ಸಂತ್ರಸ್ತರ ಅಹವಾಲುಗಳನ್ನು ಪಾವೂರು ಗ್ರಾಮದ ಇನೋಳಿ ಕಂಬಳಪದವಿನ ಸರಕಾರಿ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಆಲಿಸಿ ಅವರು ಮಾತನಾಡಿದರು.
ಭವಿಷ್ಯದ ಹಿತದೃಷ್ಟಿಯಿಂದ ಕೈಗೊಂಡ ಯೋಜನೆಯು ಇದಾಗಿದೆ. ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಆಸುಪಾಸಿನ ಗ್ರಾಮಗಳ ಜನರಿಗೆ ನಿರಂತರವಾಗಿ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಅಲ್ಲದೆ ಸೇತುವೆಯಿಂದ ಹರೇಕಳ-ಅಡ್ಯಾರ್ ಮಾತ್ರವಲ್ಲ ಹಲವು ಗ್ರಾಮಗಳ ಜನರಿಗೆ ಉಪಯೋಗವಾಗಲಿದೆ. ಅಭಿವೃದ್ಧಿಯ ಹಿನ್ನೆಲೆಯಲ್ಲಿ ಜನರು ತ್ಯಾಗಮನೋಭಾವ ಬೆಳೆಸಿಕೊಳ್ಳಬೇಕು ಎಂದು ಯು.ಟಿ. ಖಾದರ್ ಹೇಳಿದರು.
ಸಂತ್ರಸ್ತರ ಪರವಾಗಿ ಗ್ರಾಪಂ ಮಾಜಿ ಸದಸ್ಯರಾದ ಜಯರಾಮ ಆಳ್ವ ಪೋಡಾರ್ ಸೈಟ್, ವಿವೇಕ ರೈ ಕಿಲ್ಲೂರು, ಲಕ್ಷ್ಮಣ್ ಕೋಟ್ಯಾನ್, ಸ್ಥಳೀಯ ಪ್ರಮುಖರಾದ ಪ್ರಭಾಕರ ಶೆಟ್ಟಿ, ಬ್ಯಾಪ್ಟಿಸ್ ಡಿಸಿಲ್ವ, ಕ್ಯಾವಿಯೆಟ್ ಡಿಸೋಜ, ಗಿಲ್ಬರ್ಟ್ ಡಿಸೋಜ ಮತ್ತಿತರರು ಅಹವಾಲು ಸಲ್ಲಿಸಿದರು.
ಈ ಬಗ್ಗೆ ವಾರ್ತಾಭಾರತಿಯಲ್ಲಿ ಸೋಮವಾರ ವರದಿ ಪ್ರಕಟವಾಗಿತ್ತು.
ಸಭೆಯಲ್ಲಿ ಪಾವೂರು ಗ್ರಾಮದ ಅಧ್ಯಕ್ಷೆ ಕಮರುನ್ನಿಸಾ, ಉಪಾಧ್ಯಕ್ಷ ಮುಹಮ್ಮದ್ ಅನ್ಸಾರ್ ಇನೋಳಿ, ಹರೇಕಳ ಗ್ರಾಪಂ ಅಧ್ಯಕ್ಷ ಬದ್ರುದೀನ್, ಮಂಗಳೂರು ತಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು, ಕಂದಾಯ ಮತ್ತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.