'ಘಟನೆಗೆ ನಮ್ಮ ವಾಹನ ಕಾರಣವಲ್ಲ' ಎಂಬ ಕೆಎಸ್ಸಾರ್ಟಿಸಿ ಸಂಸ್ಥೆಯ ಪರ ವಕೀಲರ ವಾದವನ್ನು ತಳ್ಳಿ ಹಾಕಿದ ಹೈಕೋರ್ಟ್
ಇಬ್ಬರ ಸಾವು ಪ್ರಕರಣ
ಬೆಂಗಳೂರು, ನ.2: ಕೆಎಸ್ಸಾರ್ಟಿಸಿ (Karnataka State Road Transport Corporation) ಬಸ್ ಢಿಕ್ಕಿ ಹೊಡೆದ ಹಿನ್ನೆಲೆ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದರೂ, ಈ ಅಪಘಾತಕ್ಕೆ ನಮ್ಮ ವಾಹನ ಕಾರಣವಲ್ಲ ಎಂಬುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪರ ವಕೀಲರು ಮಂಡಿಸಿದ್ದ ವಾದವನ್ನು ಹೈಕೋರ್ಟ್ ತಳ್ಳಿಹಾಕಿದೆ.
ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಸೂಚನೆ ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕೆಎಸ್ಸಾರ್ಟಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಸಂಸ್ಥೆಯ ಪರ ವಕೀಲ ವಾದವನ್ನು ತಳ್ಳಿಹಾಕಿ, ಅರ್ಜಿಯನ್ನು ವಜಾಗೊಳಿಸಿದೆ.
ಘಟನೆಯಲ್ಲಿ ಅಪಘಾತಕ್ಕೀಡಾದ ವ್ಯಕ್ತಿ ಮೃತಪಡುವುದಕ್ಕೂ ಮುನ್ನ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದಿದೆ ಎಂಬುದಾಗಿ ಹೇಳಿಕೆ ನೀಡಿದ್ದಾರೆ. ಇದೇ ಆಧಾರದಲ್ಲಿ ಪೊಲೀಸ್ ಸಿಬ್ಬಂದಿ ತನಿಖೆ ನಡೆಸಿದೆ.
ನಿರ್ವಾಹಕ ಚಾಲಕನ ಹಿಂದೆ ಇರುವ ಸೀಟುಗಳಲ್ಲಿ ಕುಳಿತಿದ್ದು, ಮುಂದೆ ಆಗುವ ಘಟನೆ ಬಗ್ಗೆ ಗಮನಿಸುವುದಕ್ಕೆ ಸಾಧ್ಯವಿಲ್ಲ. ಅಲ್ಲದೆ, ಪ್ರಕರಣದಿಂದ ರಕ್ಷಣೆ ಪಡೆಯಲು ಚಾಲಕ ಘಟನೆ ನಡೆದಿಲ್ಲ ಎಂಬುದಾಗಿ ಹೇಳುವ ಅವಕಾಶವಿದೆ. ಹೀಗಾಗಿ ಇಬ್ಬರ ಸಾಕ್ಷ್ಯಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂಬುದಾಗಿ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಇದನ್ನೂ ಓದಿ: ಬೆಂಗಳೂರು | ದೇವಸ್ಥಾನಗಳಲ್ಲಿ ಚಪ್ಪಲಿ ಕಾಯುವ ಕೆಲಸ ಪರಿಶಿಷ್ಟರಿಗೆ ಮೀಸಲು!
ಪ್ರಕರಣವೇನು?: 2011ರ ಮಾ.3ರಂದು ಬೆಳಗ್ಗೆ 1.45ರ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದವರಿಗೆ ಬಸ್ ಢಿಕ್ಕಿ ಹೊಡೆದಿತ್ತು. ಘಟನೆಯಿಂದ ಮದ್ದೂರು ತಾಲೂಕಿನ ಶಿವಪುರ ಗ್ರಾಮದ ಆರ್.ರವಿ, ಎಸ್.ಆರ್.ರವಿ ಸಾವನ್ನಪ್ಪಿದ್ದರು. ಹರೀಶ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದರು. ಮೃತರ ಕುಟುಂಬಸ್ಥರು ಹಾಗೂ ಹರೀಶ್ ಅವರ ಸಂಬಂಧಿಕರು ಪರಿಹಾರ ಕೋರಿ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಮಂಡಳಿಯು ಮೃತರ ಕುಟುಂಬಸ್ಥರಿಗೆ ಹಾಗೂ ಗಾಯಗೊಂಡ ವ್ಯಕ್ತಿಗೆ ಕೆಎಸ್ಸಾರ್ಟಿಸಿ ಸಂಸ್ಥೆಗೆ ಪರಿಹಾರ ನೀಡಲು ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ಕೆಎಸ್ಸಾರ್ಟಿಸಿಯು ಹೈಕೋರ್ಟ್ ಮೆಟ್ಟಿಲೇರಿತ್ತು.