ಉತ್ತರಾಖಂಡದ ಯುವತಿ ಮಂಗಳೂರಿನಿಂದ ನಾಪತ್ತೆ: ಪೊಲೀಸರಿಗೆ ದೂರು

ಮಂಗಳೂರು : ಉತ್ತರಾಖಂಡ ರಾಜ್ಯದ ಯುವತಿಯೊಬ್ಬಳು ನಗರದಿಂದ ಕಾಣೆಯಾದ ಬಗ್ಗೆ ಆಕೆಯ ತಾಯಿ ಭಾವನಾ ತಿವಾರಿ ಎಂಬವರು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ. ಭಾವನಾರ ಪುತ್ರಿ ಹಿಮಾನಿ (25) ಎಂಬಾಕೆ ಅ.26ರಿಂದ ನಾಪತ್ತೆಯಾಗಿದ್ದಾರೆ.
2018ರಲ್ಲಿ ತನಗೆ ಮಹಾರಾಷ್ಟ್ರದ ಬಿಎಸ್‌ಎಫ್‌ನಲ್ಲಿ ಸರಕಾರಿ ಕೆಲಸ ಸಿಕ್ಕಿದೆ ಎನ್ನುತ್ತಾ ಹಿಮಾನಿ ಮುಂಬೈಗೆ ಹೋಗಿದ್ದು, ಬಳಿಕ ಆಗಾಗ ಮೊಬೈಲ್ ಕರೆಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದಳು. 2022ರ ಫೆಬ್ರವರಿಯಲ್ಲಿ ತನಗೆ ಮಂಗಳೂರಿಗೆ ವರ್ಗಾವಣೆ ಆಗಿದೆ ಎಂದಿದ್ದಳು. ಕಳೆದ ಅಕ್ಟೋಬರ್‌ನಲ್ಲಿ ಹಣದ ಅವಶ್ಯಕತೆ ಇದೆ ಎಂದಾಗ ಗೂಗಲ್‌ಪೇ ಮೂಲಕ ಹಣ ಕಳುಹಿಸಿಕೊಟ್ಟಿದ್ದೆವು. ಅಕ್ಟೋಬರ್ 26ರಂದು ಮಧ್ಯಾಹ್ನ ಹಿಮಾನಿ ಕರೆಮಾಡಿ ಮಂಗಳೂರು ಕೇಂದ್ರ ರೈಲು ನಿಲ್ದಾಣದ ಹತ್ತಿರವಿರುವ ಅಮಿತ್ ಮೊಬೈಲ್ ಶಾಪ್ ಬಳಿ ಇರುವುದಾಗಿ ತಿಳಿಸಿದ್ದಾಳೆ. ನಂತರ ಅವಳ ಫೋನಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ತಕ್ಷಣ ಸಂಬಂಧಿಕರು, ಸ್ನೇಹಿತರು, ಪರಿಚಯಸ್ಥರ ಬಳಿ ಹಿಮಾನಿಯ ಬಗ್ಗೆ ವಿಚಾರಿಸಿದಾಗ ಯಾವುದೇ ಮಾಹಿತಿ ದೊರೆತಿಲ್ಲ. ಹಾಗಾಗಿ ನಾಪತ್ತೆಯಾದ ಹಿಮಾನಿಯನ್ನು ಪತ್ತೆ ಮಾಡಿಕೊಡುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.