ನ.5ರಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಘಟಿಕೋತ್ಸವ: ಪ್ರೊ.ಟಿ.ಎಸ್.ರಾವ್ ರಿಗೆ ಗೌರವ ಡಾಕ್ಟರೇಟ್

ಮಂಗಳೂರು, ನ.2: ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ನ.5ರಂದು ಬೆಳಗ್ಗೆ 10ಕ್ಕೆ ಕೆ.ಎಸ್.ಹೆಗ್ಡೆ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಅವರಣದಲ್ಲಿ ಕುಲಾಧಿಪತಿಗಳಾದ ಎಸ್.ವಿನಯ ಹೆಗ್ಡೆ ಅಧ್ಯಕ್ಷತೆಯಲ್ಲಿ 12ನೆ ಘಟಿಕೋತ್ಸವ ನಡೆಯಲಿದೆ.
ವಿಶ್ವವಿದ್ಯಾನಿಲಯ ಅನುದಾನ ಆಯೋಗದ (ಯುಜಿಸಿ) ಅಧ್ಯಕ್ಷರಾದ ಪ್ರೊ.ಮಮದಿಲ ಜಗದೀಶ್ ಕುಮಾರ್ ಘಟಿಕೋತ್ಸವ ಭಾಷಣವನ್ನು ಮಾಡಲಿದ್ದಾರೆ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾ ನಿಲಯದ ಕುಲಪತಿಗಳಾದ ಪ್ರೊ.ಡಾ. ಬಿ. ಸತೀಶ್ ಕುಮಾರ್ ಭಂಡಾರಿ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಪ್ರೊ.ಡಾ. ಮಮದಿಲ ಜಗದೀಶ್ ಕುಮಾರ್ ಅವರು ನ್ಯಾನೋ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧಕರಾಗಿ ಹೆಸರು ವಾಸಿಯಾದವರು, ಹೊಸದಿಲ್ಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಹಾಲಿ, ಯುಜಿಸಿಯ ಅಧ್ಯಕ್ಷರಾಗಿ, ರಾಷ್ಟ್ರೀಯ ಶಿಕ್ಷಣ ನೀತಿ 2020ಅನ್ನು ಪರಿಣಾಮ ಕಾರಿಯಾಗಿ ಜಾರಿಗೊಳಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಅಲ್ಲದೇ ಅವರು, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಹೆಚ್ಚುವರಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ನಿವೃತ್ತ ಹಿರಿಯ ಸಲಹೆಗಾರ ಪ್ರೊ.ಟಿ.ಎಸ್.ರಾವ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಲಾಗುತ್ತಿದೆ.
ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪ್ರೊ.ರಾವ್ ಅವರು, ರಾಷ್ಟ್ರೀಯ ಪೋಲಿಯೊ ನಿರ್ಮೂಲನಾ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. 2004ರಲ್ಲಿ ಭಾರತವನ್ನು ಪೋಲಿಯೊ ಮುಕ್ತ ರಾಷ್ಟ್ರವನ್ನಾಗಿಸುವಲ್ಲಿ ಪ್ರೊ.ರಾವ್ ಅವರ ಪಾತ್ರ ಹಿರಿದು. ಜೊತೆಗೆ, ಇವರು ರಾಷ್ಟ್ರೀಯ ರೋಗನಿರೋಧಕ ಕಾರ್ಯಕ್ರಮದ ಅಡಿಯಲ್ಲಿ ದೇಸೀಯವಾಗಿ ಅಭಿವೃದ್ಧಿಪಡಿಸಿದ ಮೊದಲ ರೋಟಾ ವೈರಸ್ ಅನ್ವೇಷಣೆಯ ಹಿಂದೆಯೂ ಇವರ ಶ್ರಮವಿದೆ ಎಂದು ಸತೀಶ್ ಕುಮಾರ್ ಭಂಡಾರಿ ತಿಳಿಸಿದ್ದಾರೆ.
ಘಟಿಕೋತ್ಸವದ ದಿನದಂದು ಒಟ್ಟು 994 ಅಭ್ಯರ್ಥಿಗಳು ಸ್ನಾತಕ, ಸ್ನಾತಕೋತ್ತರ, ಡಾಕ್ಟರೇಟ್ ಪದವಿ ಹಾಗೂ ಫಲೋಶಿಪ್ ಪಡೆಯಲಿದ್ದಾರೆ. ಒಟ್ಟು 21 ಡಾಕ್ಟರೇಟ್ , 324 ಸ್ನಾತಕೋತ್ತರ, 647 ಸ್ನಾತಕ ಪದವಿ ಹಾಗೂ 2 ಫೆಲೋಶಿಪ್ ನೀಡಲಾಗುವುದು. ವೈದ್ಯಕೀಯ, ದಂತ ವೈದ್ಯಕೀಯ, ಔಷಧ ವಿಜ್ಞಾನ, ಅನ್ವಯಿಕ ಆರೋಗ್ಯ ವಿಜ್ಞಾನ, ನರ್ಸಿಂಗ್, ಮಾಧ್ಯಮ ಮತ್ತು ಸಂವಹನ, ವಾಸ್ತುಶಿಲ್ಪ ಹಾಗೂ ಇತರ ವಿಷಯಗಳಲ್ಲಿ ಈ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಒಟ್ಟು 20 ಚಿನ್ನದ ಪದಕಗಳು, 9 ದತ್ತಿ ಪದಕಗಳು ಹಾಗೂ 11 ವಿಶ್ವವಿದ್ಯಾಲಯ ಪದಕಗಳನ್ನು ಪ್ರತಿಭಾನ್ವಿತ ರಿಗೆ ವಿತರಿಸಲಾಗುವುದು ಎಂದು ಸತೀಶ್ ಕುಮಾರ್ ಭಂಡಾರಿ ತಿಳಿಸಿದ್ದಾರೆ.
ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯವು 2008 ರಲ್ಲಿ ಪ್ರಾರಂಭಗೊಂಡಿದ್ದು, ಅಂದಿನಿಂದಲೂ ಶಿಕ್ಷಣದಲ್ಲಿ ಗುಣಮಟ್ಟ ಹಾಗೂ ಮೌಲ್ಯಗಳನ್ನು ಜಾರಿಗೊಳಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ. ಕಾರ್ಕಳದ ನಿಟ್ಟೆಯಲ್ಲಿ ತನ್ನ ಮೊದಲ ಬಾಹ್ಯ ಕ್ಯಾಂಪಸ್ ಅನ್ನು ಪ್ರಾರಂಭಿಸುವ ಮೂಲಕ ಬಹು - ವಿಷಯ ಅಧ್ಯಯನ ವಿಶ್ವವಿದ್ಯಾನಿ ಲಯವಾಗಿ, ನಿಟ್ಟೆ ಪರಿಗಣಿತ ವಿಶ್ವವಿ ದ್ಯಾನಿಲಯವು ಹೊರಹೊಮ್ಮಿದೆ. 2022ರಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯವು ರಾಷ್ಟ್ರೀಯ ಸಾಂಸ್ಥಿಕ ಬ್ಯಾಂಕಿಂಗ್ ಚೌಕಟ್ಟು (ಎನ್‌ಐಆರ್‌ಎಫ್) ವತಿಯಿಂದ 75ನೇ ರಾಂಕ್ ಗಳಿಸಿದೆ. ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಸಮಿತಿ (ನ್ಯಾಕ್) ಯಿಂದ ಎ - ಪ್ಲಸ್ ಸಹಾ ವಿಶ್ವವಿದ್ಯಾನಿಲಯವು ಗಳಿಸಿದೆ. ಏಷ್ಯಾದ ಕ್ಯೂ - ಎಸ್ ವಿಶ್ವ ವಿಶ್ವವಿದ್ಯಾನಿಲಯ ರ‍್ಯಾಂಕಿಂಗ್ ಪಟ್ಟಿಯಲ್ಲಿ 401ರಿಂದ 450ರ ಸ್ಥಾನವನ್ನು ಪಡೆದಿದೆ. ತನ್ನ ಸುಸ್ಥಿರ ಅಭಿವೃದ್ಧಿ ಕಾರ್ಯಕ್ರಮಗಳಿಂದಾಗಿ ಟೈಮ್ಸ್ ಉನ್ನತ ಶಿಕ್ಷಣ ಪರಿಣಾಮ ರ‍್ಯಾಂಕಿಂಗ್ ಪಟ್ಟಿಯಲ್ಲಿ ವಿಶ್ವದ 300 ವಿಶ್ವವಿದ್ಯಾನಿಲಯಗಳ ಸಾಲಿನಲ್ಲಿ ನಿಟ್ಟೆ ಪರಿಗಣಿತ ವಿಶ್ವವಿ ದ್ಯಾನಿಲಯವು ಸೇರಿದೆ.
ಘಟಿಕೋತ್ಸವ ದಲ್ಲಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾ ನಿಲಯದ ಆಸ್ಪತ್ರೆ ಆಡಳಿತ ವಿಭಾಗದ ಸಹ ಕುಲಾಧಿಪತಿಗಳಾದ ಪ್ರೊ.ಡಾ.ಎಂ. ಶಾಂತಾರಾಮ ಶೆಟ್ಟಿ ಆಡಳಿತ ವಿಭಾಗದ ಸಹ ಕುಲಾಧಿಪತಿಗಳಾದ ವಿಶಾಲ ಹೆಗ್ಡೆ ಭಾಗವಹಿಸಲಿದ್ದಾರೆ ಎಂದು.ಡಾ. ಬಿ. ಸತೀಶ್ ಕುಮಾರ್ ಭಂಡಾರಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಹ ಕುಲಪತಿ. ಪ್ರೊ.ಡಾ.ಎಂ.ಸ್.ಮೂಡಿತ್ತಾಯ, ಕುಲಸಚಿವ ಪ್ರೊ.ಡಾ. ಹರ್ಷ ಹಾಲಹಳ್ಳಿ, ಪರಿಕ್ಷಾ ನಿಯಂತ್ರಕರಾದ ಪ್ರೊ.ಡಾ. ಪ್ರಸಾದ್ ಬಿ ಶೆಟ್ಟಿ ಉಪಸ್ಥಿತರಿದ್ದರು.