ಪರವಾನಗಿ ನವೀಕರಿಸದೆ ರಿವಾಲ್ವರ್ ಹೊಂದಿದ್ದ ಪ್ರಕರಣ: ಶಾಸಕ ಸೋಮಶೇಖರ ರೆಡ್ಡಿ ದೋಷಿ
ಬೆಂಗಳೂರು: ‘ಪರವಾನಗಿ ನವೀಕರಿಸದೆ ರಿವಾಲ್ವರ್ ಹೊಂದಿದ್ದಾರೆ’ ಎಂಬ ಆರೋಪದಡಿ ಬಳ್ಳಾರಿಯ ಬಿಜೆಪಿ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರನ್ನು ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಅನ್ವಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ದೋಷಿ ಎಂದು ಪರಿಗಣಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ.ಪ್ರೀತ್, ಷರತ್ತುಗಳ ಆಧಾರದಲ್ಲಿ ರೆಡ್ಡಿ ಅವರನ್ನು ಬಿಡುಗಡೆ ಮಾಡಿ ಆದೇಶಿಸಿದ್ದಾರೆ.
‘ಆರೋಪಿಯು ತಾವು ಎಸಗಿರುವ ಅಪರಾಧಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಅಪರಾಧಕ್ಕೆ 1 ರಿಂದ 3 ವರ್ಷಗಳವರೆಗೆ ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ. ಆದರೆ, ಇದು ಜೀವಾವಧಿ ಅಥವಾ ಮರಣ ದಂಡನೆ ವಿಧಿಸಬಹುದಾದ ಪ್ರಕರಣವಲ್ಲ. ಹೀಗಾಗಿ, ದೋಷಿಯನ್ನು ಬಿಡುಗಡೆ ಮಾಡುವುದರಿಂದ ಸಮಾಜದ ಮೇಲೆ ಯಾವುದೇ ದುಷ್ಪರಿಣಾಮ ಆಗುವುದಿಲ್ಲ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.
Next Story