ಬಂಟ್ವಾಳ: ಪರಾರಿಯಾಗಲೆತ್ನಿಸಿದ ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ ಪೊಲೀಸರು

ಬಂಟ್ವಾಳ, ನ.3: ಕಳವು ಪ್ರಕರಣದ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಸರಕಾರಿ ಬಸ್ಸಿನಲ್ಲಿ ಜೈಲಿಗೆ ಕರೆದೊಯ್ಯುತ್ತಿದ್ದ ವೇಳೆ ಪೊಲೀಸರನ್ನು ಬಸ್ಸಿನೊಳಗೆ ದೂಡಿ ಹಾಕಿ ಬಸ್ಸಿನಿಂದ ಜಿಗಿದು ಪರಾರಿಯಾಗಲು ಯತ್ನಿಸಿದ್ದು ಆರೋಪಿಯನ್ನು ಮತ್ತೆ ಪೊಲೀಸರು ಬೆನ್ನಟ್ಟಿ ಹಿಡಿದ ಘಟನೆ ತಾಲೂಕಿನ ಬ್ರಹ್ಮರಕೂಟ್ಲು ಟೋಲ್ ಪ್ಲಾಝಾ ಬಳಿ ಬುಧವಾರ ಸಂಜೆ ವೇಳೆ ನಡೆದಿದೆ.
ಕಳ್ಳಿಗೆ ಗ್ರಾಮದ, ಬ್ರಹ್ಮರಕೂಟ್ಲು - ಪೆರಿಯೋಡಿಬೀಡು ನಿವಾಸಿ ಗಿರೀಶ್ ಅಲಿಯಾಸ್ ಗಿರಿಧರ್ (52) ಎಂಬಾತ 2003ರಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಬಂಟ್ವಾಳ ಎಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ಸಿಸಿ ಸಂಖ್ಯೆ 1706/2003 ಬಂಟ್ವಾಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 15/2003 ಕಲಂ 457, 380 ಐಪಿಸಿಯಂತೆ ತಲೆಮರೆಸಿಕೊಂಡಿದ್ದ ಶಿಕ್ಷಾರ್ಹ ಅಪರಾಧಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಈತನನ್ನು ಬುಧವಾರ ಬಂಟ್ವಾಳ ನಗರ ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಈತನಿಗೆ ಶಿಕ್ಷೆ ಪ್ರಕಟಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸುವ ಸಲುವಾಗಿ ಶಿಕ್ಷಾ ಕೈದಿಯನ್ನು ಸರಕಾರಿ ಬಸ್ಸಿನಲ್ಲಿ ಬಂಟ್ವಾಳ ನಗರ ಠಾಣಾ ಎಎಸೈ ದೇವಪ್ಪ ಗೌಡ ಹಾಗೂ ಪಿಸಿ ಉಸ್ಮಾನ್ ಅವರು ಬುಧವಾರ ಸಂಜೆ ಸುಮಾರು 6.30ರ ವೇಳೆಗೆ ಬಿ.ಸಿ.ರೋಡಿನಿಂದ ಮಂಗಳೂರಿಗೆ ಕರೆದುಕೊಂಡು ಹೋಗುವ ವೇಳೆ ಬ್ರಹ್ಮರಕೋಟ್ಲು ಟೋಲ್ ಗೇಟಿನಲ್ಲಿ ಬಸ್ಸು ನಿಧಾನವಾಗುತ್ತಿದ್ದಂತೆ, ಆರೋಪಿ ಪೊಲೀಸರನ್ನು ಬಸ್ಸಿನೊಳಗೆ ದೂಡಿ ಹಾಕಿ ಬಸ್ಸಿನಿಂದ ಜಿಗಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.
ತಕ್ಷಣ ಪೊಲೀಸರು ಕೂಡಾ ಮಿಂಚಿನ ವೇಗದಲ್ಲಿ ಆರೋಪಿಯನ್ನು ಬೆನ್ನಟ್ಟಿ ಸಾರ್ವಜನಿಕರ ಸಹಾಯದಿಂದ ಮತ್ತೆ ಆತನನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಬೆಂಗಾವಲು ಕರ್ತವ್ಯಕ್ಕೆ ಅಡ್ಡಿಪಡಿಸಿ ಪರಾರಿಯಾಗಲು ಯತ್ನಿಸಿದಕ್ಕಾಗಿ ಆತನ ವಿರುದ್ಧ ಬಂಟ್ವಾಳ ನಗರ ಠಾಣಾ ಅಪರಾಧ ಕ್ರಮಾಂಕ 104/2022 ಕಲಂ 224, 353 ಐಪಿಸಿಯಂತೆ ಮತ್ತೊಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.