ಕಿನ್ನಿಗೋಳಿಯಲ್ಲಿ ಕಾರು ಅಪಘಾತ: ಮಹಿಳೆ ಸಹಿತ ಐವರಿಗೆ ಗಾಯ

ಮುಲ್ಕಿ, ನ.3: ಕಿನ್ನಿಗೋಳಿ ಮೂಡಬಿದ್ರೆ ರಾಜ್ಯ ಹೆದ್ದಾರಿಯ ಎಂಸಿಸಿ ಬ್ಯಾಂಕ್ ಬಳಿ ಕಾರು ಡಿಕ್ಕಿಯಾಗಿ ಮಹಿಳೆ ಹಾಗೂ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಾಗಿದ್ದು ಮಹಿಳೆಯ ಸ್ಥಿತಿ ಗಂಭೀರ ಎನ್ನಲಾಗಿದೆ.
ಗಂಭೀರ ಗಾಯಗೊಂಡ ಮಹಿಳೆಯನ್ನು ಪಕ್ಷಿಕೆರೆ ಕೆಮ್ರಾಲ್ ನಿವಾಸಿ ಜಯಂತಿ ಶೆಟ್ಟಿ (50) ಎಂದು ಗುರುತಿಸಲಾಗಿದೆ. ಉಳಿದಂತೆ ಕಾರಿನಲ್ಲಿದ್ದ ಚಾಲಕ ತೋಡಾರ್ ಗಳಾದ ನಿವಾಸಿ ಚಾಲಕ ಕೆ ಹೆಚ್ ಅಬ್ದುಲ್ ಖಾದರ್ (65), ರಿದಾ (16), ರಶ್ಮಿ (18), ಕೌಸರ್ (46), ಎಂದು ಗುರುತಿಸಲಾಗಿದ್ದು, ಕಿನ್ನಿಗೊಳಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುರತ್ಕಲ್ ಕೃಷ್ಣಾಪುರದಿಂದ ಮೂಡಬಿದ್ರೆಯ ತೋಡಾರ್ ಕಡೆಗೆ ಹೋಗುತ್ತಿದ್ದ ಕಾರು ಕಿನ್ನಿಗೋಳಿ ರಾಜ್ಯ ಹೆದ್ದಾರಿ ಎಂಸಿಸಿ ಬ್ಯಾಂಕ್ ಬಳಿ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ತೀರಾ ಬಲ ಬದಿಗೆ ಚಲಿಸಿ ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದೆ.
ಈ ಸಂದರ್ಭ ಮಹಿಳೆ ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದಿರುವಾಗ ಸ್ಥಳೀಯರಾದ ಆಲ್ವಿನ್, ಸ್ಟ್ಯಾನಿ ಪಿಂಟೋ ಶೈಲಾ ಸಿಕ್ವೇರಾ ಮತ್ತಿತರರು ಸೇರಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.
ಅಪಘಾತದ ದೃಶ್ಯ ಸ್ಥಳೀಯ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಾರಿನ ಚಾಲಕನ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಅಪಘಾತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.