ಕಟೀಲು ಯಕ್ಷಗಾನ ಮೇಳಗಳ ಕಾಲಮಿತಿ ಪ್ರದರ್ಶನ ರದ್ದುಪಡಿಸಲು ಒತ್ತಾಯ
ನ.6ರಂದು ಕಟೀಲನಮ್ಮನೆಡೆ ಭಕ್ತರ ನಡೆ

ಮಂಗಳೂರು, ನ.3: ಕಟೀಲು ಯಕ್ಷಗಾನ ಮೇಳಗಳ ಪ್ರದರ್ಶನ ವನ್ನು ಕಾಲಮಿತಿಗೊಳಪಡಿಸುವ ನಿರ್ಧಾರವನ್ನು ಹಿಂಪಡೆಯಬೇಕು. ಯಕ್ಷಗಾನ ಪರಂಪರೆಯಂತೆ ರಾತ್ರಿಯಿಂದ ಬೆಳಗ್ಗಿನವರೆಗೆ ಕಟೀಲು ಮೇಳಗಳ ಯಕ್ಷಗಾನ ಪ್ರದರ್ಶನಗೊಳ್ಳಬೇಕು ಎಂದು ಕಟೀಲು ಮೇಳದ ಯಕ್ಷಗಾನ ಸೇವಾ ಸಮಿತಿಗಳು ಮತ್ತು ಖಾಯಂ ಸೇವಾದಾರರ ಒಕ್ಕೂಟವಾದ ಶ್ರೀ ಕಟೀಲು ಯಕ್ಷಸೇವಾ ಸಮನ್ವಯ ಸಮಿತಿ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಸಮನ್ವಯ ಸಮಿತಿ ಸಂಚಾಲಕ ಅಶೋಕ ಕೃಷ್ಣಾಪುರ, ಸಮಿತಿ ವತಿಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ವತಿಯಿಂದ ನ.6 ರಂದು ಬೆಳಗ್ಗೆ 8.30ರಿಂದ ಬಜ್ಪೆಶಾರದಾ ಶಕ್ತಿ ಮಂಟಪದಿಂದ ಶ್ರೀ ಕ್ಷೇತ್ರ ಕಟೀಲಿಗೆ ಪಾದಯಾತ್ರೆ ಆಯೋಜಿಸಲಾಗಿದೆ ಎಂದರು.
ಶ್ರೀ ಕಟೀಲಮ್ಮನೆಡೆ ಭಕ್ತರ ನಡೆ ಪಾದಯಾತ್ರೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕಟೀಲು ಮೇಳದ ಸೇವಾರ್ಥಿಗಳ ಸಹಿತ 8000 ಕ್ಕೂ ಅಧಿಕ ಮಂದಿ ಭಕ್ತರು ಭಾಗವಹಿಸುವರು. ಪಾದಯಾತ್ರೆ ಬಳಿಕ ಶ್ರೀ ದೇವಿ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುವುದು. ಕಟೀಲು ಮೇಳದ ಆಟಗಳನ್ನು ಯಥಾಪ್ರಕಾರ ರಾತ್ರಿ ಪೂರ್ತಿ ನಡೆಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಈಗಾಗಲೇ ಜಿಲ್ಲಾ ಉಸುತಿವಾರಿ ಹಾಗೂ ಕನ್ನಡ ಮತುತಿ ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲೆಯ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಅವರೆಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಟೀಲು ದೇವಸ್ಥಾನದ ಆಡಳಿತ ಮಂಡಳಿಗೂ ಮನವಿ ಸಲ್ಲಿಸಿದ್ದೇವೆ. ಸೇವಾಕರ್ತರ ಆಶಯದಂತೆ ರಾತ್ರಿ ಪೂರ್ತಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಅವರು ಹೇಳಿದರು.
ಕಟೀಲು ಮೇಳದ ಯಕ್ಷಗಾನ ಪ್ರದರ್ಶನವನ್ನು ಸಂಜೆ 4.30ರಿಂದ ರಾತ್ರಿ 10ರವರೆಗೆ ಕಾಲಮಿತಿಗೆ ಸೀಮಿತಗೊಳಿಸಿ ನಡೆಸುವುದಾಗಿ ಕಟೀಲು ದೇವಳದ ಆಡಳಿತ ಮಂಡಳಿ ಕಳೆದ ಆಗಸ್ಟ್‌ನಲ್ಲಿ ಘೋಷಿಸಿದೆ. ಇದು ಏಕಪಕ್ಷೀಯ ನಿರ್ಧಾರವಾಗಿದ್ದು, ಭಕ್ತರು ಹಾಗೂ ಸೇವಾದಾರರಿಗೆ ಆಘಾತ ಉಂಟುಮಾಡಿದೆ. ಕಟೀಲು ಮೇಳದ ಯಕ್ಷಗಾನ ಧಾರ್ಮಿಕ ನಂಬಿಕೆಯ ಪ್ರತೀಕವಾಗಿದೆ. ಹರಿಕೆ ಹೊತ್ತು ಯಕ್ಷಗಾನ ಆಡಿಸಲಾಗುತ್ತಿದೆ. ಮಧ್ಯರಾತ್ರಿ ಬಳಿಕ ಕಟೀಲು ದೇವಿ ಆಟ ನೋಡಲು ಆಗಮಿಸುತ್ತಾರೆ. ಬೆಳಗ್ಗಿನ ಜಾವ ವೀಳ್ಯ ನೀಡಿ ಪ್ರಸಾದ ಸ್ವೀಕರಿಸಬೇಕು ಎಂಬ ನಂಬಿಕೆ ಇದೆ. ಕಾಲಮಿತಿ ಯಕ್ಷಗಾನದಿಂದ ಮೂಲ ಆಶಯ ಸೊರಗಿ ಜನರ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತಿದೆ. ಈ ಬಗ್ಗೆ ಭಕ್ತರು ಈಗಾಗಲೇ ಸಭೆ ನಡೆಸಿ ಪ್ರತಿಭಟನೆ ವ್ಯಕ್ತಪಡಿದ್ದಾರೆ ಎಂದರು.
ಶಬ್ದಮಾಲಿನ್ಯ ಕುರಿತು ಸುಪ್ರೀಂ ಕೋರ್ಟ್ ಆದೇಶ ಪ್ರಕಾರ ಕಾಲಮಿತಿ ಯಕ್ಷಗಾನ ನಡೆಸಲಾಗುತ್ತಿದೆ ಎಂದು ಹೇಳಲಾಗುತಿತಿದೆ. ಯಕ್ಷಗಾನ ಕ್ಕೆ ಸಂಬಂಧಿಸಿದಂತೆ ಈ ನಿರ್ಬಂಧವನ್ನು ಸರಕಾರ ತೆಗೆದುಹಾಕಬೇಕು. ರಾತ್ರಿಪೂರ್ತಿ ಆಟ ನಡೆಸಲು ಜಿಲ್ಲಾಡಳಿತ, ಕಟೀಲು ದೇವಸ್ಥಾನದ ಆಡಳಿತ ಮಂಡಳಿ, ಮೇಳದವರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಮನ್ವಯ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ, ಪ್ರಮುಖರಾದ ಕೃಷ್ಣಪ್ಪ ಪೂಜಾರಿ, ಪಿ.ಸುಧಾಕರ ಕಾಮತ್, ಶರ್ಮಿಳಾ ಉಪಸ್ಥಿತರಿದ್ದರು.