ಟ್ವೆಂಟಿ-20 ವಿಶ್ವಕಪ್: ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನಕ್ಕೆ ಭರ್ಜರಿ ಜಯ
ಸಿಡ್ನಿ, ನ.3: ಮಳೆಬಾಧಿತ ಟ್ವೆಂಟಿ-20 ವಿಶ್ವಕಪ್‌ನ ಸೂಪರ್-12ರ ಸುತ್ತಿನ ಗ್ರೂಪ್-2ರ ಪಂದ್ಯದಲ್ಲಿ ಪಾಕಿಸ್ತಾನ ತಂಡವು ದಕ್ಷಿಣ ಆಫ್ರಿಕಾವನ್ನು 33 ರನ್ ಅಂತರದಿಂದ ಸೋಲಿಸಿದೆ. ಟೂರ್ನಮೆಂಟ್‌ನಲ್ಲಿ ಎರಡನೇ ಗೆಲುವು ದಾಖಲಿಸಿದ ಪಾಕ್ ಸೆಮಿ ಫೈನಲ್ ತಲುಪುವ ಅಲ್ಪ ವಿಶ್ವಾಸವನ್ನು ಇಟ್ಟುಕೊಂಡಿದೆ.
ಪಾಕಿಸ್ತಾನಕ್ಕೆ ಸೆಮಿ ಫೈನಲ್ ಅವಕಾಶ ಸಿಗಬೇಕಾದರೆ ನ.6ರಂದು ಬಾಂಗ್ಲಾದೇಶವನ್ನು ಮಣಿಸಬೇಕು. ಅದೇ ದಿನ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ನೆದರ್‌ಲ್ಯಾಂಡ್ಸ್ ಗೆಲ್ಲಬೇಕು ಇಲ್ಲವೇ ಭಾರತ ವಿರುದ್ಧ ಪಂದ್ಯದಲ್ಲಿ ಝಿಂಬಾಬ್ವೆ ಗೆಲ್ಲುವುದನ್ನು ಆಶಿಸಬೇಕಾಗುತ್ತದೆ
ಗುರುವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಗೆಲ್ಲಲು 186 ರನ್ ಗುರಿ ಬೆನ್ನಟ್ಟುತ್ತಿದ್ದಾಗ ಮಳೆ ಆಗಮಿಸಿತು. ಆಗ ದಕ್ಷಿಣ ಆಫ್ರಿಕಾವು 9 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿತ್ತು. ಮಳೆ ನಿಂತ ಬಳಿಕ ಪಂದ್ಯ ಪುನರಾರಂಭವಾದಾಗ ದಕ್ಷಿಣ ಆಫ್ರಿಕಾ ತಂಡಕ್ಕೆ ಡಿಎಲ್ ನಿಯಮದ ಪ್ರಕಾರ 14 ಓವರ್‌ಗಳಲ್ಲಿ 142 ರನ್ ಪರಿಷ್ಕೃತ ಗುರಿ ನೀಡಲಾಯಿತು.
ಶಾಹೀನ್ ಶಾ ಅಫ್ರಿದಿ(3-14) ನೇತೃತ್ವದ ಪಾಕ್ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾವು 14 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಅಫ್ರಿದಿಗೆ ಶಾದಾಬ್ ಖಾನ್(2-16) ಸಾಥ್ ನೀಡಿದರು.
ಆಫ್ರಿಕಾದ ಬ್ಯಾಟಿಂಗ್‌ನಲ್ಲಿ ಆರಂಭಿಕ ಆಟಗಾರ ಹಾಗೂ ನಾಯಕ ಟೆಂಬಾ ಬವುಮಾ(36 ರನ್, 19 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಮಾರ್ಕ್ರಮ್(20 ರನ್), ಸ್ಟಬ್ಸ್(18 ರನ್)ಎರಡಂಕೆಯ ಸ್ಕೋರ್ ಗಳಿಸಿದರು.
ಇದಕ್ಕೂ ಮೊದಲು ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಪಾಕಿಸ್ತಾನ ತಂಡ ಮಧ್ಯಮ ಕ್ರಮಾಂಕದ ಬ್ಯಾಟರ್ ಇಫ್ತಿಕಾರ್ ಅಹ್ಮದ್(51 ರನ್, 35 ಎಸೆತ, 3 ಬೌಂಡರಿ, 2 ಸಿಕ್ಸರ್)ಹಾಗೂ ಆಲ್‌ರೌಂಡರ್ ಶಾದಾಬ್ ಖಾನ್(52 ರನ್, 22 ಎಸೆತ, 3 ಬೌಂಡರಿ, 4 ಸಿಕ್ಸರ್)ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು.
ಪಾಕಿಸ್ತಾನವು 13ನೇ ಓವರ್ ಅಂತ್ಯಕ್ಕೆ 95 ರನ್‌ಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಜೊತೆಯಾದ ಇಫ್ತಿಕಾರ್ ಹಾಗೂ ಶಾದಾಬ್ ಆರನೇ ವಿಕೆಟಿಗೆ 82 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು. ಇದಕ್ಕೂ ಮೊದಲು ಇಫ್ತಿಕಾರ್ ಅವರು ಮುಹಮ್ಮದ್ ನವಾಝ್ ಜೊತೆಗೂ 5ನೇ ವಿಕೆಟಿಗೆ 52 ರನ್ ಸೇರಿಸಿ ಇನಿಂಗ್ಸ್ ರಿಪೇರಿ ಮಾಡಿದ್ದರು.
ಮುಹಮ್ಮದ್ ಹ್ಯಾರಿಸ್ ಹಾಗೂ ಮುಹಮ್ಮದ್ ನವಾಝ್ ತಲಾ 28 ರನ್ ಗಳಿಸಿದರು. ಆರಂಭಿಕ ಬ್ಯಾಟರ್‌ಗಳಾದ ಮುಹಮ್ಮದ್ ರಿಝ್ವಾನ್(4) ಹಾಗೂ ಬಾಬರ್ ಆಝಂ(6 ರನ್)ದೊಡ್ಡ ಮೊತ್ತ ಗಳಿಸಲು ವಿಫಲರಾದರು. ದಕ್ಷಿಣ ಆಫ್ರಿಕಾದ ಬೌಲಿಂಗ್ ವಿಭಾಗದಲ್ಲಿ ಅನ್ರಿಚ್ ನೊರ್ಟ್ಜೆ(4-41)ದುಬಾರಿಯಾದರೂ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು.
22 ಎಸೆತಗಳಲ್ಲಿ 52 ರನ್ ಹಾಗೂ 2 ವಿಕೆಟ್‌ಗಳನ್ನು ಕಬಳಿಸಿ ಅಲ್‌ರೌಂಡ್ ಪ್ರದರ್ಶನ ನೀಡಿದ್ದ ಶಾದಾಬ್ ಖಾನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.