ಪ್ರಯಾಣಿಕರ ಸುರಕ್ಷತೆಗಾಗಿ ‘ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್’ ವ್ಯವಸ್ಥೆ ಜಾರಿ: ಸಚಿವ ಜೆ.ಸಿ.ಮಾಧುಸ್ವಾಮಿ
ಸಚಿವ ಸಂಪುಟ ಸಭೆ
ಬೆಂಗಳೂರು, ನ.3: ಸಾರ್ವಜನಿಕ ಮಜಲು ವಾಹನಗಳಿಗೆ ಮತ್ತು ಟ್ಯಾಕ್ಸಿಗಳಿಗೆ ಪ್ರಯಾಣಿಕರ ಸುರಕ್ಷತೆ, ಮುಖ್ಯವಾಗಿ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗಾಗಿ ಕಡ್ಡಾಯವಾಗಿ ‘ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಉಪಕರಣ ಹಾಗೂ ತುರ್ತು ಆಪತ್ಕಾಲಿನ ಬಟನ್ ಅಳವಡಿಸಲು ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ 20.36 ಕೋಟಿ ರೂ.ವೆಚ್ಚದಲ್ಲಿ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಯೋಜನೆಯನ್ನು ಕೇಂದ್ರ 60ಃ40ರ ಅನುಪಾತದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಅನುದಾನ ಒದಗಿಸಲಿದೆ. ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರವು ಅಂದಾಜು 20.35 ಕೋಟಿ ರೂ.ಯೋಜನಾ ವೆಚ್ಚ ನಿಗದಿಪಡಿಸಿದೆ ಎಂದರು.
ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಯೋಜನಾ ಸಮಾಲೋಚಕರನ್ನು ಹಾಗೂ ಕ್ಲೌಡ್ ಸರ್ವೀಸ್ ಗಳ ಸೇವೆಯನ್ನು ಕೇಂದ್ರ ಸರಕಾರದ ವತಿಯಿಂದ ನೀಡಲಾಗುತ್ತದೆ. ಅದಕ್ಕೆ ಸಂಬಂಧಿಸಿದ 4.97 ಕೋಟಿ ರೂ.ಗಳನ್ನು ಕೇಂದ್ರ ಸರಕಾರದಿಂದ ಒದಗಿಸಲಾದ ಅನುದಾನದಿಂದ ಭರಿಸಲಾಗುವುದು ಎಂದು ಮಾಧುಸ್ವಾಮಿ ಹೇಳಿದರು.
ರಾಜ್ಯದ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಸಾರಿಗೆ ವರ್ಗದ ಭಾರಿ ಪ್ರಯಾಣಿಕ ವಾಹನಗಳು ಅತಿ ವೇಗದಿಂದ ಸಂಚರಿಸಿ ರಸ್ತೆ, ಅಪಘಾತಗಳಿಗೆ ಕಾರಣವಾಗುತ್ತವೆ. ಇದನ್ನು ನಿಯಂತ್ರಿಸಲು ವಿಎಲ್ಟಿಎಸ್ ಆಧಾರಿತ ಜಿಪಿಆರ್ಎಸ್ ವ್ಯವಸ್ಥೆಯ ಉಪಕರಣವನ್ನು ವಾಹನಗಳಲ್ಲಿ ಅಳವಡಿಸಿದಲ್ಲಿ ವಾಹನಗಳು ಸಂಚರಿಸುವ ವೇಗ, ನಿಗದಿಪಡಿಸಿದ ಸ್ಥಳಗಳಲ್ಲಿ ನಿಲುಗಡೆ ಮಾಡಲಾಗುತ್ತಿದೆಯೆ? ಸಮಾಜಘಾತುಕ ಶಕ್ತಿಗಳಿಂದ ರಕ್ಷಿಸಲು ವಾಹನದ ಸ್ಥಳವನ್ನು ಪತ್ತೆಹಚ್ಚುವ ಮೂಲಕ ಸುರಕ್ಷತೆಯನ್ನು ಪಾಲಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ವಾಹನಗಳು ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳ ತಲುಪುವಂತಾಗಿ ಅನವಶ್ಯಕ ವಿಳಂಬವನ್ನು ತಡೆಯಬಹುದು. ಅನಧಿಕೃತವಾಗಿ ಸಂಚರಿಸುವ ವಾಹನಗಳ ಮೇಲೆ ನಿಗಾ ವಹಿಸಲು ಅನುಕೂಲವಾಗುತ್ತದೆ. ವಾಹನ ಚಾಲಕರು ನಿಯಮಬಾಹಿರವಾಗಿ ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ತೊಂದರೆಯಾಗುವಂತೆ ಬೇರೆ ಮಾರ್ಗಗಳಲ್ಲಿ ಸಂಚರಿಸುವುದನ್ನು ತಪ್ಪಿಸಬಹುದಾಗಿದೆ ಎಂದು ಮಾಧುಸ್ವಾಮಿ ಹೇಳಿದರು.
ಖಾಸಗಿ ವಲಯದ ಸಾರ್ವಜನಿಕ ಸಾರಿಗೆ ವಾಹನಗಳಾದ ಮಜಲು ವಾಹನಗಳು ಮತ್ತು ಪ್ರವಾಸಿ ವಾಹನಗಳಲ್ಲಿ ಕಡ್ಡಾಯವಾಗಿ ವಿಎಲ್ಟಿಎಸ್ ಅಳವಡಿಸುವುದರಿಂದ ವಾಹನಗಳು ವೇಳಾಪಟ್ಟಿಯನುಸಾರ ಸಂಚಾರ ನಡೆಸುತ್ತಿರುವ ಚಲನವಲನಗಳನ್ನು ಗುರುತಿಸಿ ಅನಾರೋಗ್ಯಕ್ಕೆ ಪೈಪೋಟಿಯನ್ನು ತಪ್ಪಿಸಬಹುದಾಗಿದೆ ಎಂದು ಅವರು ತಿಳಿಸಿದರು.
ವಾಹನಗಳ ವಿವರ: ಪ್ರಯಾಣಿಕರ ವಾಹನಗಳು, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ಗಳು(ಮ್ಯಾಕ್ಸಿಕ್ಯಾಬ್-1,16,268, ಮೋಟಾರ್ ಕ್ಯಾಬ್-335209, ಟ್ಯಾಕ್ಸಿ ಕ್ಯಾಬ್-43) ಒಟ್ಟು 4,51,520 ವಾಹನಗಳು. ಪ್ರಯಾಣಿಕರ ಬಸ್ಸುಗಳು(ಶಾಲಾ ವಾಹನಗಳು-16432, ಖಾಸಗಿ ಮಜಲು ವಾಹನಗಳು-23077, ಕೆಎಸ್ಸಾರ್ಟಿಸಿ ಮಜಲು ವಾಹನಗಳು-34701, ಒಪ್ಪಂದ ವಾಹನಗಳು-5138, ಅಖಿಲ ಭಾರತ ಪ್ರವಾಸಿ ವಾಹನಗಳು-1900) 71,248 ವಾಹನಗಳು, ರಾಷ್ಟ್ರೀಯ ರಹದಾರಿ ಹೊಂದಿದ ಒಟ್ಟು ಸರಕು ಸಾಗಾಣಿಕೆ ವಾಹಗಳು 85,949 ಇವೆ ಎಂದು ಅವರು ತಿಳಿಸಿದರು.
ಈ ಯೋಜನೆ ಅನುಷ್ಠಾನಗೊಳಿಸುವ ಕಾರ್ಯಕ್ಕಾಗಿ ಯೋಜನಾ ವರದಿಯನ್ನು ಸಿದ್ಧಪಡಿಸಲು ದಿಲ್ಲಿಯ ಡಿಐಎಂಟಿಎಸ್ ಸಂಸ್ಥೆಯ ಸೇವೆಯನ್ನು 81 ಲಕ್ಷ ರೂ.ವೆಚ್ಚದಲ್ಲಿ ನೇರವಾಗಿ ಪಡೆಯಲು ರಾಜ್ಯ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದಂತೆ ಸಾರಿಗೆ ಇಲಾಖೆಗೆ ಪಾರದಶರ್ಕತೆ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.
ಜಿಎಸ್ಟಿ ಒಳಗೊಂಡಂತೆ ಬಂಡವಾಳ ವೆಚ್ಚ 9.23 ಕೋಟಿ ಮತ್ತು ಎರಡು ವರ್ಷಗಳ ನಿರ್ವಹಣಾ ವೆಚ್ಚ ಒಳಗೊಂಡಂತೆ 6.21 ಕೋಟಿ ಮತ್ತು ಕ್ಲೌಡ್ ಸರ್ವೀಸ್ ಶುಲ್ಕ 4.97 ಕೋಟಿ ಒಟ್ಟು ಯೋಜನಾ ವೆಚ್ಚ 20.41 ಕೋಟಿರೂ.ಗಳಾಗುತ್ತದೆ. ಡಿಪಿಆರ್ ಸಿದ್ಧಪಡಿಸಲು ಭರಿಸಲಾದ 81 ಲಕ್ಷ ರೂ. ಒಳಗೊಂಡಂತೆ ಈ ಯೋಜನೆಯ ಒಟ್ಟು ವೆಚ್ಚ 21.22 ಕೋಟಿ ರೂ.ಗಳಾಗುತ್ತದೆ ಎಂದು ಅವರು ತಿಳಿಸಿದರು.