ಕೊಲೆ ಪ್ರಕರಣ: ಭಾರತದ ನರ್ಸ್ ಬಗ್ಗೆ ಮಾಹಿತಿಗೆ 1 ದಶಲಕ್ಷ ಡಾಲರ್ ಬಹುಮಾನ ಘೋಷಿಸಿದ ಆಸ್ಟ್ರೇಲಿಯಾದ ಪೋಲಿಸರು

ಮೆಲ್ಬೋರ್ನ್, ನ.3: 4 ವರ್ಷದ ಹಿಂದೆ ಆಸ್ಟ್ರೇಲಿಯಾದ ಬೀಚ್ (Australian beach)ನಲ್ಲಿ ಮಹಿಳೆಯೊಬ್ಬಳನ್ನು ಹತ್ಯೆ ಮಾಡಿದ ಆರೋಪಿ, ಭಾರತ ಮೂಲದ ನರ್ಸ್ (Nurse)ಬಳಿಕ ಭಾರತಕ್ಕೆ ಪಲಾಯನ ಮಾಡಿದ್ದು ಆತನ ಬಗ್ಗೆ ಮಾಹಿತಿ ನೀಡಿದವರಿಗೆ 1 ದಶಲಕ್ಷ ಡಾಲರ್ ಬಹುಮಾನ ನೀಡುವುದಾಗಿ ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್(Queensland) ಪೊಲೀಸರು ಘೋಷಿಸಿದ್ದಾರೆ.
2018ರ ಅಕ್ಟೋಬರ್ ನಲ್ಲಿ ತನ್ನ ನಾಯಿಯೊಂದಿಗೆ ವ್ಯಾಂಗೆಟಿ ಬೀಚ್ ನಲ್ಲಿ ವಾಯುವಿಹಾರಕ್ಕೆ ತೆರಳಿದ್ದ 24 ವರ್ಷದ ಟೊಯಾ ಕಾರ್ಡಿಂಗ್ಲೆ ಎಂಬ ಯುವತಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಭಾರತೀಯ ಮೂಲದ ನರ್ಸ್ ರಜ್ವೀಂದರ್ ಸಿಂಗ್ ಎಂಬಾತ ಪ್ರಮುಖ ಆರೋಪಿಯಾಗಿದ್ದ. ಆದರೆ ಹತ್ಯೆ ನಡೆದ ಮರುದಿನವೇ ಆತ ತನ್ನ ಪತ್ನಿ ಮತ್ತು ಮೂವರು ಮಕ್ಕಳನ್ನು ಆಸ್ಟ್ರೇಲಿಯಾದಲ್ಲೇ ಬಿಟ್ಟು ಭಾರತಕ್ಕೆ ಪರಾರಿಯಾಗಿದ್ದ.
ಸಿಂಗ್ ಅಂತಿಮವಾಗಿ ಭಾರತದಲ್ಲಿ ಇರುವುದು ದೃಢಪಟ್ಟಿದೆ. ಆತನ ಬಗ್ಗೆ ಮಾಹಿತಿ ನೀಡಿದವರಿಗೆ 1 ದಶಲಕ್ಷ ಡಾಲರ್ ಬಹುಮಾನ ನೀಡಲಾಗುವುದು ಎಂದು ಆಸ್ಟ್ರೇಲಿಯಾದ ಪತ್ತೇದಾರಿ ಇಲಾಖೆಯ ಪ್ರಭಾರ ಸುಪರಿಂಟೆಂಡೆಂಟ್ ಸೋನಿಯಾ ಸ್ಮಿತ್ ಹೇಳಿದ್ದಾರೆ.





