33 ವರ್ಷಗಳಲ್ಲೇ ಅತ್ಯಧಿಕ ಬಡ್ಡಿದರ ಹೆಚ್ಚಳ ಮಾಡಿದ ಬ್ಯಾಂಕ್ ಆಫ್ ಇಂಗ್ಲಂಡ್

ಲಂಡನ್, ನ.3: ಆಕಾಶಕ್ಕೆ ಏರುತ್ತಿರುವ ಹಣದುಬ್ಬರನ್ನು ನಿಯಂತ್ರಿಸುವ ಪ್ರಯತ್ನವಾಗಿ 33 ವರ್ಷಗಳಲ್ಲೇ ತನ್ನ ಅತೀ ದೊಡ್ಡ ಬಡ್ಡಿದರ ಹೆಚ್ಚಳವನ್ನು ಘೋಷಿಸಿರುವ ಬ್ರಿಟನ್‍ನ ಬ್ಯಾಂಕ್ ಆಫ್ ಇಂಗ್ಲೆಂಡ್(ಬಿಒಇ)(Bank of England), ದೇಶವು ಸುದೀರ್ಘ ಮತ್ತು ಯಾತನಾಮಯ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದೆ ಎಂದು ಎಚ್ಚರಿಕೆ ನೀಡಿದೆ.
ಗ್ರಾಹಕ ಬೆಲೆ ಹಣದುಬ್ಬರ ಸೆಪ್ಟಂಬರ್‍ನಲ್ಲಿ 40 ವರ್ಷದಲ್ಲೇ ಅತ್ಯಧಿಕ ಪ್ರಮಾಣಕ್ಕೆ ಏರಿಕೆಯಾದ ಹಿನ್ನೆಲೆಯಲ್ಲಿ ಬ್ಯಾಂಕ್ ಆಫ್ ಇಂಗ್ಲೆಂಡ್ ತನ್ನ ಮೂಲ ಬಡ್ಡಿದರವನ್ನು (ಕೇಂದ್ರ ಬ್ಯಾಂಕ್ ಇತರ ಬ್ಯಾಂಕ್‍ಗಳಿಗೆ ವಿಧಿಸುವ ಬಡ್ಡಿದರ) 2.25%ದಿಂದ 3%ಕ್ಕೆ ಏರಿಸಿರುವುದಾಗಿ ಗುರುವಾರ ಘೋಷಿಸಿದೆ. ಇದು 1989ರ ಬಳಿಕದ ಅತ್ಯಧಿಕ ಬಡ್ಡಿದರ ಹೆಚ್ಚಳವಾಗಿದೆ.
ಮುಂದಿನ ಆರ್ಥಿಕ ದೃಷ್ಟಿಕೋನ ಅತ್ಯಂತ ಸವಾಲಿನದ್ದಾಗಿದೆ. ಸೆಪ್ಟಂಬರ್‍ನಲ್ಲಿ ಗ್ರಾಹಕ ಬೆಲೆ ಹಣದುಬ್ಬರ 10.1%ಕ್ಕೆ ಏರಿದ್ದು ಈ ತ್ರೈಮಾಸಿಕ ಅವಧಿಯ ಅಂತ್ಯಕ್ಕೆ 11%ಕ್ಕೆ ತಲುಪುವ ಸಾಧ್ಯತೆಯಿದೆ. ಬ್ರಿಟನ್‍ನ ಆರ್ಥಿಕತೆ ಈಗಾಗಲೇ 2 ವರ್ಷಗಳ ಕಾಲ ಉಳಿಯಬಹುದಾದ ಹಿಂಜರಿತವನ್ನು ಪ್ರವೇಶಿಸಿದೆ ಎಂದು ಬ್ಯಾಂಕ್ ಎಚ್ಚರಿಸಿದೆ