‘‘ಭಾರತವೀಗ ಆತ್ಮನಿರ್ಭರ; ಹಗರಣಗಳಿಗೆ ಕೊನೆ’’: ಮೋದಿ

ಹೊಸದಿಲ್ಲಿ, ನ. 3: ಭಾರತದ ರಕ್ಷಣಾ ಕ್ಷೇತ್ರದಲ್ಲಿ ಹಗರಣಗಳು ಸಂಭವಿಸುವ ಸಾಧ್ಯತೆಯು ‘‘ಕೊನೆಗೊಳ್ಳುತ್ತಿದೆ’’("Ending"), ಯಾಕೆಂದರೆ ದೇಶವು ತನ್ನ ರಕ್ಷಣಾ ಸಲಕರಣೆಗಳನ್ನು ತಾನೇ ಉತ್ಪಾದಿಸುವ ಮೂಲಕ ‘ಆತ್ಮನಿರ್ಭರ’ವಾಗುವತ್ತ ಸಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi)ಗುರುವಾರ ಹೇಳಿದ್ದಾರೆ. ಭ್ರಷ್ಟಾಚಾರ ಮತ್ತು ಭ್ರಷ್ಟರ ಜೊತೆಗೆ ವ್ಯವಹರಿಸುವಾಗ ನೀವು ‘ರಕ್ಷಣಾತ್ಮಕ’ವಾಗಿ ನಡೆದುಕೊಳ್ಳುವ ಅಗತ್ಯವಿಲ್ಲ ಎಂದು ಅವರು ಅಧಿಕಾರಿಗಳಿಗೆ ಮತ್ತು ತನಿಖಾ ಸಂಸ್ಥೆಗಳಿಗೆ ಭರವಸೆ ನೀಡಿದ್ದಾರೆ.
ದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆದ ಕೇಂದ್ರೀಯ ಜಾಗೃತ ಆಯೋಗ (ಸಿವಿಸಿ)ದ ‘ಜಾಗೃತಿ ಸಪ್ತಾಹ’ದ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಭ್ರಷ್ಟರು ಯಾವುದೇ ‘ರಾಜಕೀಯ-ಸಾಮಾಜಿಕ’ ಬೆಂಬಲವನ್ನು ಪಡೆಯಬಾರದು ಹಾಗೂ ಅವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರಿಗೆ ಯಾವುದೇ ಸಂದರ್ಭದಲ್ಲಿ ರಕ್ಷಣೆ ದೊರೆಯಬಾರದು ಎಂದು ಹೇಳಿದರು.
ಹಿಂದಿನ ವರ್ಷಗಳಲ್ಲಿ, ವಿದೇಶಿ ವಸ್ತುಗಳ ಮೇಲಿನ ಅಗಾಧ ಅವಲಂಬನೆಯು ದೇಶದಲ್ಲಿ ಭ್ರಷ್ಟಾಚಾರಕ್ಕೆ ಪ್ರಮುಖ ಕಾರಣವಾಗಿತ್ತು ಎಂದು ಅವರು ಹೇಳಿದರು. ‘‘ರಕ್ಷಣಾ ಕ್ಷೇತ್ರವು ವಿದೇಶಗಳನ್ನು ಅವಲಂಬಿಸುವಂತೆ ಮಾಡಕೊಳ್ಳಲಾಗಿತ್ತು ಎನ್ನುವುದು ನಮಗೆ ಗೊತ್ತಿದೆ. ಅದುವೇ ಭ್ರಷ್ಟಾಚಾರಕ್ಕೆ ಬಹುದೊಡ್ಡ ಕಾರಣವಾಗಿತ್ತು. ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸಲು ನಮ್ಮ ಸರಕಾರ ಮಾಡಿರುವ ಪ್ರಯತ್ನಗಳು ಹಗರಣಗಳ ಸಾಧ್ಯತೆಗಳನ್ನು ಕೊನೆಗೊಳಿಸಿವೆ. ಭಾರತವೀಗ, ರೈಫಲ್ಗಳಿಂದ ಹಿಡಿದು ಯುದ್ಧ ವಿಮಾನಗಳು ಮತ್ತು ಸಾರಿಗೆ ವಿಮಾನಗಳವರೆಗೆ ತನ್ನ ರಕ್ಷಣಾ ಸಲಕರಣೆಗಳನ್ನು ತಾನೇ ಉತ್ಪಾದಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ’’ ಎಂದು ಹೇಳಿದರು.







