ಮಧ್ಯಪ್ರದೇಶ: ಬಸ್-ಕಾರು ಅಪಘಾತ, 11 ಮಂದಿ ಮೃತ್ಯು

ಭೋಪಾಲ್(ಮ.ಪ್ರ.): ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಇಬ್ಬರು ಮಕ್ಕಳು ಸೇರಿದಂತೆ 11 ಮಂದಿ ಮೃತಪಟ್ಟಿರುವ ದಾರುಣ ಘಟನೆ ಮಧ್ಯಪ್ರದೇಶದ ಬೆತುಲ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿರುವ ಕುರಿತು ವರದಿಯಾಗಿದೆ.
ಜಿಲ್ಲಾ ಕೇಂದ್ರ ದಿಂದ ಸುಮಾರು 36 ಕಿ.ಮೀ.ದೂರದಲ್ಲಿರುವ ಬೈನ್ಸ್ ದೇಹಿ ರಸ್ತೆಯಲ್ಲಿ ತಡರಾತ್ರಿ 2ಕ್ಕೆ ಅಪಘಾತ ಸಂಭವಿಸಿದೆ. ಈ ವೇಳೆ 6 ಮಂದಿ ಪುರುಷರು, ಮೂವರು ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸ್ ನಿಯಂತ್ರಣ ಕೊಠಡಿಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ಶಿವರಾಜ್ ಸಿಂಗ್ ಠಾಕೂರ್ ಹೇಳಿದ್ದಾರೆ.
ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಪಘಾತ ಸಂಭವಿಸಿದಾಗ ಕಾರಿನ ಚಾಲಕ ನಿದ್ದೆಯ ಮಂಪರಿನಲ್ಲಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಪೊಲೀಸರ ಪ್ರಕಾರ ಮೃತಪಟ್ಟವರೆಲ್ಲರೂ ಕಾರ್ಮಿಕರಾಗಿದ್ದು, ಮಹಾರಾಷ್ಟ್ರದ ಅಮರಾವತಿಯಿಂದ ವಾಪಸ್ ಆಗುತ್ತಿದ್ದರು ಎನ್ನಲಾಗಿದೆ.
Next Story





