ನ.15ರಿಂದ ಕುಂದಾಪುರದಲ್ಲಿ ಸಿಐಟಿಯು ರಾಜ್ಯ ಸಮ್ಮೇಳನ

ಕುಂದಾಪುರ, ನ.4: ಕಾರ್ಮಿಕರ ಐಕ್ಯತೆ -ಜನತೆಯ ಸೌಹಾರ್ದತೆಗಾಗಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು) 15ನೇ ರಾಜ್ಯ ಸಮ್ಮೇಳನವು ನ.15ರಿಂದ 17ವರೆಗೆ ಕುಂದಾಪುರದ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಸಿಐಟಿಯು 15ನೆ ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ಕುಂದಾಪುರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 31 ಜಿಲ್ಲೆಗಳಿಂದ ವಿವಿಧ ಕಾರ್ಮಿಕರ ನಡುವೆ ಅವರ ಕ್ಷೇತ್ರಗಳಲ್ಲಿ ದುಡಿಯುತ್ತಿ ರುವ 130 ಮಹಿಳಾ ಪ್ರತಿನಿಧಿಗಳು ಸೇರಿದಂತೆ ಒಟ್ಟು 420 ಮಂದಿ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ನ.15ರಂದು ಬೆಳಿಗ್ಗೆ 10.30ಕ್ಕೆ ಸಿಐಟಿಯು ಅಖಿಲ ಭಾರತ ಅಧ್ಯಕ್ಷ ಡಾ.ಹೇಮಲತಾ ಸಮ್ಮೇಳನವನ್ನು ಉದ್ಘಾಟಿಸಲಿರುವರು. ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ರಾಜ್ಯಸಭಾ ಸದಸ್ಯರಾದ ತಪನ್ ಸೇನ್ ಮತ್ತು ಉಪಾಧ್ಯಕ್ಷ ಎ.ಕೆ.ಪದ್ಮನಾಭನ್ ಮಾರ್ಗದರ್ಶನ ನೀಡಲಿರುವರು. ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಮೀನಾಕ್ಷಿ ಸುಂದರಂ ಹಾಗೂ ಸಿಐಟಿಯು ರಾಜ್ಯ ಮುಖಂಡರುಗಳ ಭಾಗವಹಿಸಲಿರುವರು. ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಅಧ್ಯಕ್ಷತೆ ವಹಿಸಲಿರುವರು ಎಂದು ಅವರು ಹೇಳಿದರು.
ಸಮ್ಮೇಳನದ ಕೊನೆಯ ದಿನ ನ.17ರಂದು ಮಧ್ಯಾಹ್ನ 2.30 ಗಂಟೆಗೆ ಕುಂದಾಪುರ ಶಾಸ್ತ್ರಿ ವೃತ್ತದಿಂದ ಬೃಹತ್ ಮೆರವಣಿಗೆ ಹಾಗೂ ನೆಹರು ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಇದರಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಪ್ರಧಾನ ಭಾಷಣ ಮಾಡಲಿರುವರು ಎಂದು ಅವರು ತಿಳಿಸಿದರು.
2014ರ ನಂತರ ಮೋದಿ ನೇತೃತ್ವದ ಬಿಜೆಪಿ ಸರಕಾರವು ಕಾರ್ಮಿಕ ವರ್ಗ ವನ್ನು ಕೇಂದ್ರಿಕರಿಸಿ ವ್ಯಾಪಕ ದಾಳಿ ನಡೆಸುತ್ತಿದೆ. ಈವರೆಗಿನ 44 ಕಾರ್ಮಿಕ ಕಾನೂನುಗಳಲ್ಲಿ 15 ಕಾನೂನುಗಳನ್ನು ರದ್ದುಗೊಳಿಸಿ ಉಳಿದ 29 ಕಾನೂನು ಗಳನ್ನು ವಿಲೀನಗೊಳಿಸಿ 4 ಸಂಹಿತೆಗಳನ್ನಾಗಿ ರೂಪಿಸಿ ಶ್ರಮಿಕರನ್ನು ಬಂಡವಾಳದ ಗುಲಾಮರನ್ನಾಗಿ ಸುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಸುತ್ತಿವೆ ಎಂದು ಬಾಲಕೃಷ್ಣ ಶೆಟ್ಟಿ ಆರೋಪಿಸಿದರು.
ಇದರಿಂದ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕೋಟ್ಯಂತರ ಕಾರ್ಮಿಕರಿಗೆ, ಕಟ್ಟಡ, ಹಂಚು, ಬೀಡಿ ಮತ್ತಿತ್ತರ ಕಾರ್ಮಿಕರ ಸೌಲಭ್ಯಗಳಿಗೆ ಕತ್ತರಿ ಬೀಳಲಿದೆ. ಸ್ಕೀಂ ನೌಕರರಾದ ಬಿಸಿಯೂಟ, ಅಂಗನವಾಡಿ, ಆಶಾ ಕಾರ್ಯ ಕರ್ತೆಯರು ಹಾಗೂ ಗುತ್ತಿಗೆ ಕಾರ್ಮಿಕರು, ಹೊರಗುತ್ತಿಗೆ, ಟ್ರೈನಿ, ಅಪ್ರೆಂಟಿಸ್ ಮೊದಲಾದ ಹೆಸರಿನಲ್ಲಿ ಕಡಿಮೆ ಕೂಲಿಗೆ ದುಡಿಸಿಕೊಳ್ಳುತ್ತಿರುವುದು ಹೆಚ್ಚಳವಾಗಿದೆ. ಆಟೋ, ಟ್ಯಾಕ್ಸಿ, ಖಾಸಗಿ ಬಸ್ಸು ಚಾಲಕರು, ನಿರ್ವಾಹಕರಿಗೆ ಕಲ್ಯಾಣ ಮಂಡಳಿ ಮೂಲಕ ಸಾಮಾಜಿಕ ಭದ್ರತೆ ಇಲ್ಲದಂತಾಗಿದೆ ಎಂದು ಅವರು ತಿಳಿಸಿದರು.
ದೇಶದ ಜನರ ಐಕ್ಯತೆ ವಿಭಜಿಸುವ ಕೆಲಸಗಳನ್ನು ಕೋಮುವಾದಿ ಮತಾಂಧ ಶಕ್ತಿಗಳು ಇಂತಹ ನೀತಿಗಳನ್ನು ಮರೆಮಾಚಲು ಸೌಹಾರ್ದತೆಗಾಗಿ ಆಚರಿಸಲ್ಪ ಡುವ ಹಬ್ಬ, ಜಾತ್ರೆಗಳಿಗೂ ಮತಾಂಧತೆಯ ಬಣ್ಣ ಹಚ್ಚಲಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಹಿಜಾಬ್ ಹೆಸರಿನಲ್ಲಿ ಜನರನ್ನು ಪ್ರತ್ಯೇಕಿಸುವ ಕೆಲಸವಾಗಿದೆ ಎಂದು ಟೀಕಿಸಿದ ಅವರು, ಮುಂದಿನ ಮೂರು ವರ್ಷಗಳಲ್ಲಿ ಸಿಐಟಿಯು ಸಂಘಟನೆ ತನ್ನ ಹೋರಾಟಗಳನ್ನು ನಿರ್ಣಯಿಸಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಕೆ.ಶಂಕರ್, ಕೋಶಾಧಿಕಾರಿ ಎಚ್.ನರಸಿಂಹ, ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಪ್ರಚಾರ ಸಮಿತಿ ಸಂಚಾಲಕ ಚಂದ್ರಶೇಖರ್ ವಿ. ಉಪಸ್ಥಿತರಿದ್ದರು.







