ಕತರ್‌ನಲ್ಲಿ ಎಂಟು ಭಾರತೀಯರ ಬಂಧನ: ತನ್ನ ಪ್ರಜೆಗಳ ಬಿಡುಗಡೆಗೆ ಭಾರತ ಶ್ರಮಿಸುತ್ತಿದೆ ಎಂದ ಎಂಇಎ

ಹೊಸದಿಲ್ಲಿ: ಕತರ್‌ನಲ್ಲಿ (Qatar) ಬಂಧನದಲ್ಲಿರುವ ಎಂಟು ಭಾರತೀಯರನ್ನು ಬಿಡುಗಡೆಗೊಳಿಸಲು ಮತ್ತು ಸ್ವದೇಶಕ್ಕೆ ವಾಪಸ್ ಕರೆತರಲು ತಾನು ಶ್ರಮಿಸುತ್ತಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA)ವು ತಿಳಿಸಿದೆ.
ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು, ಈ ನಿಟ್ಟಿನಲ್ಲಿ ಕತರ್‌ನಲ್ಲಿಯ ಭಾರತೀಯ ರಾಯಭಾರಿ ಕಚೇರಿಯು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿದರು.
ಸೆಪ್ಟಂಬರ್ ಆರಂಭದಲ್ಲಿ ಕತರ್‌ನಲ್ಲಿ ಭಾರತೀಯ ನೌಕಾಪಡೆಯ ಎಂಟು ಮಾಜಿ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅವರನ್ನು ಏಕೆ ಬಂಧಿಸಲಾಗಿದೆ ಅಥವಾ ಅವರ ವಿರುದ್ಧದ ಆರೋಪಗಳೇನು ಎನ್ನುವುದು ತಿಳಿದುಬಂದಿಲ್ಲ.
ಬಂಧನದಲ್ಲಿರುವ ಎಲ್ಲ ಎಂಟೂ ಜನರು ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಆ್ಯಂಡ್ ಕನ್ಸಲ್ಟನ್ಸಿ ಸರ್ವೀಸಿಸ್‌ನಲ್ಲಿ ಉದ್ಯೋಗದಲ್ಲಿದ್ದರು. ತಾನು ಕತರ್ ರಕ್ಷಣಾ ಇಲಾಖೆ, ಭದ್ರತಾ ಮತ್ತು ಇತರ ಸರಕಾರಿ ಏಜೆನ್ಸಿಗಳ ಸ್ಥಳೀಯ ಉದ್ಯಮ ಪಾಲುದಾರನಾಗಿರುವುದಾಗಿ ಕಂಪನಿಯು ಹೇಳಿಕೊಂಡಿದೆ.
ಬಂಧಿತರಿಗೆ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಅವಕಾಶ ನೀಡಲಾಗಿದೆ ಮತ್ತು ಕತರ್‌ನಲ್ಲಿರುವ ಭಾರತೀಯ ಅಧಿಕಾರಿಗಳು ಅವರ ಯೋಗಕ್ಷೇಮವನ್ನು ಖಚಿತಪಡಿಸಿಕೊಂಡಿದ್ದಾರೆ ಎಂದು ಬಾಗ್ಚಿ ಗುರುವಾರ ತಿಳಿಸಿದರು.
ಬಂಧಿತರು ಕೆಲವು ಸಂದರ್ಭಗಳಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದಾರೆ ಎಂದು ತಿಳಿಸಿದ ಬಾಗ್ಚಿ, ‘ಇನ್ನೊಂದು ಸುತ್ತಿನ ರಾಯಭಾರ ಕಚೇರಿಯ ಸಂಪರ್ಕಕ್ಕೆ ಅವಕಾಶ ನೀಡುವಂತೆ ನಾವು ಕೋರಿಕೊಂಡಿದ್ದೇವೆ ಮತ್ತು ಈ ಕುರಿತು ಕತರ್ ಅಧಿಕಾರಿಗಳ ಸಂಪರ್ಕದಲ್ಲಿದ್ದೇವೆ ’ ಎಂದು ಹೇಳಿದರು.
ಇದನ್ನೂ ಓದಿ: ಕಾರಿಗೆ ಒರಗಿ ನಿಂತಿದ್ದ ಬಾಲಕನ ಎದೆಗೆ ಕಾಲಿನಿಂದ ಒದ್ದ ಚಾಲಕನ ಬಂಧನ







