ವೇಶ್ಯಾಗೃಹಗಳಲ್ಲಿ ಸಿಲುಕಿದ್ದ ಅಪ್ರಾಪ್ತೆ ದೂರು ನೀಡಿದಲ್ಲಿ ವ್ಯಕ್ತಿಯನ್ನು ಗ್ರಾಹಕನನ್ನಾಗಿ ಪರಿಗಣಿಸಲಾಗದು: ಹೈಕೋರ್ಟ್
ಬೆಂಗಳೂರು, ನ.4: ವೇಶ್ಯಾಗೃಹದಲ್ಲಿ ಸಿಲುಕಿಕೊಂಡಿರುವ ಅಪ್ರಾಪ್ತೆ ತನ್ನೊಂದಿಗೆ ಒತ್ತಾಯಪೂರಕವಾಗಿ ಲೈಂಗಿಕ ಕ್ರಿಯೆ ನಡೆಸಿದ್ದ ಎಂಬುದಾಗಿ ವ್ಯಕ್ತಿಯೊಬ್ಬರ ವಿರುದ್ಧ ದೂರು ದಾಖಲಿಸಿದಲ್ಲಿ ಆರೋಪಿಯನ್ನು ಗ್ರಾಹಕ ಎಂದು ಪರಿಗಣಿಸಿ ಕೇಸ್‍ನಿಂದ ಕೈಬಿಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.
ಮಂಗಳೂರಿನ ವೇಶ್ಯಾಗೃಹಕ್ಕೆ ಹೋಗಿದ್ದ ಕೇರಳ ಮೂಲದ ಮಹಮ್ಮದ್ ಶರೀಫ್(45) ಎನ್ನುವವರು ತಮ್ಮ ವಿರುದ್ಧ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಮತ್ತು ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆ ಪ್ರಕ್ರಿಯೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.
ವೇಶ್ಯಾಗೃಹಗಳ ಮೇಲೆ ಪೊಲೀಸರು ದಾಳಿ ನಡೆಸುವ ಸಂದರ್ಭದಲ್ಲಿ ಸಿಕ್ಕಿ ಹಾಕಿಕೊಳ್ಳುವವರನ್ನು ಗ್ರಾಹಕರು ಎಂದು ಪರಿಗಣಿಸಬಹುದು. ಆದರೆ, ಅಪ್ರಾಪ್ತರಾದ ಸಂತ್ರಸ್ತರೆ ಆರೋಪಿ ವಿರುದ್ಧ ದೂರು ನೀಡಿದಲ್ಲಿ ಗ್ರಾಹಕ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ಅಲ್ಲದೆ, ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಪ್ರಕರಣವೇನು?: ಚಿಕ್ಕಮಗಳೂರು ಮೂಲದ 17 ವರ್ಷದ ಅಪ್ರಾಪ್ತೆ ಮಂಗಳೂರಿನ ತಮ್ಮ ಸಂಬಂಧಿಕರ ಮನೆಯಲ್ಲಿದ್ದು ವಿದ್ಯಾಭ್ಯಾಸದಲ್ಲಿ ತೊಡಗಿದ್ದರು. ಆಕೆಯ ಸಮಸ್ಯೆಗಳಿಗೆ ಪರಿಹಾರ ನೀಡುವ ರೀತಿಯಲ್ಲಿ ಪರಿಚಯಿಸಿಕೊಂಡು ಕೆಲವು ಆರೋಪಿಗಳು ವೇಶ್ಯಾವಾಟಿಕೆಗೆ ಬಳಸಿಕೊಂಡಿದ್ದರು. ನಂತರ ವೇಶ್ಯಾವಾಟಿಕೆ ಸ್ಥಳದಿಂದ ತಪ್ಪಿಸಿಕೊಂಡಿದ್ದ ಸಂತ್ರಸ್ತ ಬಾಲಕಿ ಪೋಷಕರಿಗೆ ಈ ಅಂಶವನ್ನು ತಿಳಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡಿದ್ದ ಪೊಲೀಸರು ಅರ್ಜಿದಾರರು ಸೇರಿದಂತೆ ಇತರ ಆರೋಪಿಗಳ ವಿರುದ್ಧ ಮಾನವ ಕಳ್ಳಸಾಗಾಣೆ(ನಿಯಂತ್ರಣ) ಕಾಯಿದೆ, ಅಪ್ರಾಪ್ತ ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯಿದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯಡಿಯಲ್ಲಿ ಪ್ರಕರಣ ದಾಖಸಿಕೊಂಡು ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದರು.