ಗ್ರಾಪಂ ನೌಕರರ ಬೇಡಿಕೆ ಈಡೇರಿಸದಿದ್ದರೆ ಹೋರಾಟ: ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಶ್ರೇಯೋಭಿವೃದ್ಧಿ ಸಂಘ ಎಚ್ಚರಿಕೆ

ಉಡುಪಿ : ಗ್ರಾಮೀಣ ಭಾಗದಲ್ಲಿನ ರಾಜಕೀಯ ಹಾಗೂ ಮೇಲಾಧಿ ಕಾರಿಗಳ ಒತ್ತಡದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಗ್ರಾಪಂ ನೌಕರರ ಬಹು ಮುಖ್ಯ ಬೇಡಿಕೆಗಳನ್ನು ಒಂದು ತಿಂಗಳಲ್ಲಿ ಈಡೇರಿಸದಿದ್ದರೆ ಗ್ರಾಮೀಣ ಭಾಗ ದಲ್ಲಿನ ಎಲ್ಲ ಕಾರ್ಯಗಳನ್ನು ಸ್ಥಗಿತಗೊಳಿಸಿ ಬೆಳಗಾವಿ ಸುವರ್ಣ ವಿಧಾನ ಸೌಧ ಎದುರು ಡಿ.12ರಿಂದ ಅನಿರ್ಧಿಷ್ಟಾವಧಿ ಹೋರಾಟವನ್ನು ಹಮ್ಮಿಕೊಳ್ಳಲಾಗು ವುದು ಎಂದು ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಶ್ರೇಯೋಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಕುಲಾಲ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಪಂ ನೌಕರರಿಗೆ ಸೂಕ್ತ ಸ್ಥಾನಮಾನ ಮತ್ತು ಸವಲತ್ತುಗಳನ್ನು ನೀಡದೆ ಕೇವಲ ಕನಿಷ್ಠ ವೇತನ ನೀಡಿ ಜೀತದಾಳುಗಳಂತೆ ಹಗಲಿರುಳು ದುಡಿಸಿಕೊಳ್ಳುತ್ತಿದೆ. ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ ಮೃತಪಟ್ಟ 174 ಗ್ರಾಪಂ ನೌಕರರಲ್ಲಿ ಯಾರಿಗೂ ಈವರೆಗೂ ಸರಕಾರದಿಂದ ಪೂರ್ಣಪ್ರಮಾಣದ ಪರಿಹಾರ ಸಿಕ್ಕಿಲ್ಲ ಎಂದು ದೂರಿದರು.
ಗ್ರಾಪಂ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲರ್ಕ್/ಕ್ಲರ್ಕ್ ಕಮ್ ಡಿಇಓ/ಬಿಲ್ಲ್ ಕಲೆಕ್ಟರ್/ಡಾಟ ಎಂಟ್ರಿ ಆಪರೇಟರ್‌ಗಳಿಗೆ ಸಿ ದರ್ಜೆ ಸ್ಥಾನ ಮಾನ ಮತ್ತು ಅಟೆಂಡರ್, ಕ್ಲೀನರ್ಸ್, ವಾಟರ್‌ಮೆನ್/ಪಂಪ್ ಚಾಲಕ ಇತ್ಯಾದಿ ವೃಂದದವರಿಗೆ ಡಿ ದರ್ಜೆ ನೀಡಿ, ನಗರ ಮತ್ತು ಪಟ್ಟಣ ಪಂಚಾಯತ್‌ನಂತೆ ವೇತನ ಶ್ರೇಣಿ ನಿಗದಿಪಡಿಸಬೇಕು. ಜೊತೆಗೆ ನೌಕರರು ಮತ್ತು ನೌಕರರ ಅವಲಂಬಿತರಿಗೆ ಆರೋಗ್ಯ ಭದ್ರತೆಯೊಂದಿಗೆ ನಿವೃತ್ತಿ ಜೀವನಕ್ಕೆ ಭವಿಷ್ಯ ನಿಧಿ/ ಪಿಂಚಣಿ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
2020ರ ಸೆ.29ರ ಸರಕಾರದ ಆದೇಶದ ಪೂರ್ವದಲ್ಲಿ ಕಾರ್ಯನಿರ್ವಹಿಸು ತ್ತಿರುವ ಎಲ್ಲ ಪಂಚಾಯತ್ ನೌಕರರಿಗೆ ಅವರ ವಿದ್ಯಾರ್ಹತೆ ಮತ್ತು ವಯೋ ಮಿತಿಯನ್ನು ಪರಿಗಣಿಸಿದೆ ಹಾಗೂ ಪಂಚಾಯತ್‌ಗಳಲ್ಲಿ ಹುದ್ದೆಗಳ ಗರಿಷ್ಠ ಮಿತಿಯನ್ನು ನಿಗದಿಪಡಿಸಿ ಜಿಪಂನಿಂದ ಅನುಮೋದನೆ ನೀಡಬೇಕು. ವಿದ್ಯಾ ರ್ಹತೆ ಮತ್ತು ವಯೋಮಿತಿ ಹಾಗೂ ಇತರೆ ಸಮಸ್ಯೆಗಳಿಂದ ಜಿಪಂ ಅನು ಮೋದನೆಯಾಗದೇ ನಿವೃತ್ತಿಯಾದ ಮತ್ತು ಮುಂದೆ ನಿವೃತ್ತಿಯಾಗುವ ಎಲ್ಲ ಗ್ರಾಪಂ ನೌಕರರಿಗೆ ನಿವೃತ್ತಿ ಉಪಧನ ಮಂಜೂರು ಮಾಡಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಪ್ರಶಾಂತ್ ಕೆ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿಷೇಕ್, ಕೋಶಾಧಿಕಾರಿ ಸಚಿನ್ ಉಪಸ್ಥಿತರಿದ್ದರು.







