ಸದ್ಯ ಕೋವಿಡ್-19 ಮುಕ್ತ ಉಡುಪಿ ಜಿಲ್ಲೆ

ಉಡುಪಿ, ನ.4: 2020ರ ಮಾರ್ಚ್ 24ರಂದು ದುಬೈಯಿಂದ ಬಂದ ಮಣಿಪಾಲದ 34ರ ಹರೆಯದ ಯುವಕನಲ್ಲಿ ಕೋವಿಡ್-19 ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಕಾಣಿಸಿಕೊಂಡ ಬಳಿಕ ಇದೀಗ ಮತ್ತೊಮ್ಮೆ ಉಡುಪಿ ಕೋವಿಡ್ ಸೋಂಕಿತರಿಂದ ಮುಕ್ತ ಜಿಲ್ಲೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿದ್ದ ಮೂವರು ಸೋಂಕಿತ ವ್ಯಕ್ತಿಗಳು ಇಂದು ಸೋಂಕಿನಿಂದ ಸಂಪೂರ್ಣ ಗುಣಮುಖರಾಗುವ ಮೂಲಕ ಮತ್ತೊಮ್ಮೆ ಜಿಲ್ಲೆ ಕೋವಿಡ್ ಸೋಂಕಿತ ಶೂನ್ಯ ಜಿಲ್ಲೆ ಎನಿಸಿಕೊಂಡಿದೆ. ನಿನ್ನೆ ಮೂವರು ಜಿಲ್ಲೆಯಲ್ಲಿ ಸೋಂಕಿತರಿದ್ದು, ಇಂದು ಅವರೆಲ್ಲರೂ ಗುಣಮುಖ ರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಿಸಿದೆ. ಹೀಗಾಗಿ ಸದ್ಯ ಯಾವುದೇ ಕೊರೋನ ಬಾಧಿತ ವ್ಯಕ್ತಿ ಜಿಲ್ಲೆಯಲ್ಲಿಲ್ಲ.
ಎರಡು ವರ್ಷಗಳಲ್ಲಿ ಎ.12ರಂದು ಮೊದಲ ಬಾರಿ ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಸೋಂಕಿತರಿಲ್ಲದ ದಿನವಾಗಿ ದಾಖಲಾಗಿತ್ತು. ಅನಂತರ ಸತತ ಎಂಟು ದಿನ ಇದೇ ದಾಖಲೆ ಮುಂದುವರಿದಿತ್ತು. ಅನಂತರ ಎ.20ರಿಂದ ಮತ್ತೆ ಸೋಂಕಿತರು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ ನಿಧಾನವಾಗಿ ಏರತೊಡಗಿತ್ತು. ಒಂದು ಹಂತದಲ್ಲಿ ಇದು ನೂರರ ಗಡಿಯನ್ನೂ ದಾಟಿತ್ತು. ಆಗಸ್ಟ್ ತಿಂಗಳ ಬಳಿಕ ಸಕ್ರಿಯರ ಸಂಖ್ಯೆ 20-30ರ ಆಸುಪಾಸಿನಲ್ಲೇ ಇತ್ತು.
ನವೆಂಬರ್ ಬಳಿಕ ಮತ್ತೆ ಏಕಂಕಿಗೆ ಇಳಿದ ಕೋವಿಡ್ ಬಾಧಿತರ ಸಂಖ್ಯೆ ನ.1ಕ್ಕೆ 7, ನ.2ಕ್ಕೆ 3ಕ್ಕಿಳಿದು ಇಂದು ಮೂವರು ಸಹ ಗುಣಮುಖರಾಗುವ ಮೂಲಕ ಸಕ್ರಿಯರ ಸಂಖ್ಯೆ ಶೂನ್ಯಕ್ಕಿಳಿದಿದೆ. ಇಂದು ಸಹ ಕೋವಿಡ್ ಪರೀಕ್ಷೆಗೊಳಗಾದ 215 ಮಂದಿಯಲ್ಲಿ ಯಾವುದೇ ಸೋಂಕಿತರು ಪತ್ತೆಯಾಗಿಲ್ಲ. ಈ ಮೂಲಕ ಜಿಲ್ಲೆ ಈಗ ಕೋವಿಡ್ ಮುಕ್ತ ಜಿಲ್ಲೆಯಾಗಿ ಪರಿಗಣಿಸಲ್ಪಟ್ಟಿದೆ.
ಇಂದು ಒಟ್ಟು 215 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು. ಉಡುಪಿ ತಾಲೂಕಿನ 95, ಕುಂದಾಪುರದ 82 ಹಾಗೂ ಕಾರ್ಕಳ ತಾಲೂಕಿನ 38 ಮಂದಿಯಲ್ಲಿ ಯಾರೂ ಸೋಂಕಿತರು ಪತ್ತೆಯಾಗಿಲ್ಲ.







