ಸಾಮಾನ್ಯರ ಬದುಕನ್ನು ಹಸನಾಗಿಸುವುದು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕೆಲಸ: ಕೋಲಾರ ಎಸ್ಪಿ ಡಿ. ದೇವರಾಜ್
ಕೋಲಾರ: ಸಾಮಾನ್ಯರ ಬದುಕನ್ನು ಹಸನಾಗಿಸುವುದು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕೆಲಸ' ಮೀಸಲಾತಿ ಸರಿಯಾದ ಫಲಾನುಭವಿಗಳಿಗೆ ಸಿಕ್ಕಿದರೆ ಮಾತ್ರ ಮೀಸಲಾತಿಗೆ ಅರ್ಥ ಬರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ್ ಅಭಿಪ್ರಾಯಪಟ್ಟರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ನಿವೃತ್ತ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್ ದಾಸ್ ಬರೆದಿರುವ ‘ಮಾನವಹಕ್ಕು’ ಹಾಗೂ 'ಮೀಸಲಾತಿ; ಭ್ರಮೆ ಮತ್ತು ವಾಸ್ತವ' ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ, ಮೀಸಲಾತಿ: ಭ್ರಮೆ ಮತ್ತು ವಾಸ್ತವ' ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
'ಮೀಸಲಾತಿಯನ್ನು ಸರ್ಕಾರಿ ಉದ್ಯೋಗಕ್ಕಷ್ಟೇ ಸೀಮಿತಗೊಳಿಸಿದ್ದೇವೆ. ಸರ್ಕಾರಿ ಸೌಲಭ್ಯ ಪಡೆಯಲೂ ಮೀಸಲಾತಿ ಇದೆ.ಮೀಸಲಾತಿಯಡಿ ಸರ್ಕಾರಿ ಯೋಜನೆ ವಿತರಿಸಲಾಗುತ್ತಿದೆ. ಆಗಿದ್ದರೆ ಅದು ನಿಜವಾಗಿಯೂ ಫಲಾನುಭವಿಗಳಿಗೆ ತಲುಪುತ್ತಿದೆಯೇ? ತಲುಪದಿದ್ದರೆ ಮಧ್ಯದಲ್ಲಿ ಯಾರ ಪಾಲಾಯಿತು? ಸರಿಯಾದ ವ್ಯಕ್ತಿಗೆ ತಲುಪಿದ್ದರೆ ಹಾಗೂ ಸರಿಯಾಗಿ ಅನುಷ್ಠಾನಗೊಂಡಿದ್ದರೆ ಮಾತ್ರ ಮೀಸಲಾತಿಗೆ ಅರ್ಥ ಬರುತ್ತದೆ' ಎಂದು ಪ್ರತಿಪಾದಿಸಿದರು.
'ಐಎಎಸ್ ಅಥವಾ ಐಪಿಎಸ್ ಮಾಡಿದ ಅಧಿಕಾರಿ ಬೇರೆಲ್ಲೋ ನಗರದಲ್ಲಿ ಕೆಲಸ ಮಾಡುವಾಗ ವಾಪಸ್ ಊರಿಗೆ ಹೋಗಿ ದಾರಿ ತೋರಿಸುವ ಕೆಲಸ ಮಾಡಬೇಕು. ಆಗ ಮೀಸಲಾತಿ ಪಡೆದು ಉದ್ಯೋಗ ಗಿಟ್ಟಿಸಿಕೊಂಡಿದ್ದಕ್ಕೆ ಅರ್ಥ ಬರುತ್ತದೆ. ಮಹಡಿ ಹತ್ತಿದ ಏಣಿಯನ್ನು ಒಮ್ಮೆ ತಿರುಗಿ ನೋಡಬೇಕು' ಎಂದು ಕಿವಿಮಾತು ಹೇಳಿದರು.
'ಶ್ರಮಪಟ್ಟು ದುಡಿಯುವ ಮನಸ್ಥಿತಿಯನ್ನು ಜನರಿಗೆ ತುಂಬಬೇಕು. ಬಡವ ಎಂದು ಕೆಳಗೆ ಎಳೆಯಬೇಡಿ. ಬದಲಾಗಿ ಅಂಥವರಿಗೆ ಹೋರಾಟಗಾರರು ಸ್ವಾಭಿಮಾನ ತುಂಬಬೇಕು. ಬಡತನ ಎಂಬುದು ಅಂಗವೈಕಲ್ಯ ಅಲ್ಲ. ಮನಸ್ಸಿದ್ದರೆ ಎತ್ತರಕ್ಕೆ ಏರಬಹುದು' ಎಂದು ಸಲಹೆ ನೀಡಿದರು.
ಕೃತಿಗಳ ಕುರಿತು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ.ಡೊಮಿನಿಕ್ ಮಾತನಾಡಿ, 'ಜಾಗತಿಕ ಪೌರತ್ವ ಎಂಬುದು ಆಗಬೇಕು. ಕುವೆಂಪು ಹೇಳಿದ ವಿಶ್ವ ಮಾನವ, ವಿಶ್ವ ಪ್ರಜೆ ಪರಿಕಲ್ಪನೆಗೆ ನಾಗಮೋಹನದಾಸ್ ಈ ಪುಸ್ತಕಗಳು ಪೂರಕವಾಗಿವೆ' ಎಂದರು.
'ತುಳಿತಕ್ಕೆ ಒಳಗಾಗಿರುವ ಸಮಾಜದ ತಳವರ್ಗದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಬೇಕು. ಹೋರಾಟ ನಿಂತ ನೀರಾಗಿಲ್ಲ. ರೈತ ಚಳವಳಿ ದೊಡ್ಡ ಮಟ್ಟದಲ್ಲಿ ನಮ್ಮ ಅಂತಃರಂಗ ತಟ್ಟಿದೆ' ಎಂದು ಹೇಳಿದರು.
'ನಮ್ಮೊಳಗಿನ ಗಾಯಗಳಿಗೆ ಈ ಪುಸ್ತಕಗಳಲ್ಲಿ ಮುಲಾಮು ಇದೆ. ಮೀಸಲಾತಿಯ ಸಮಗ್ರ ಒಳನೋಟವಿದೆ. ಅಧ್ಯಯನಶೀಲತೆ ಹೆಚ್ಚಾಗಬೇಕು ಎಂದರು.
'ಮೀಸಲಾತಿ ಎಂಬುದು ಸಾಮಾಜಿಕ ನ್ಯಾಯದ ಒಂದು ಸಣ್ಣ ಭಾಗ ಅಷ್ಟೇ. ಅದೇ ಸಾಮಾಜಿಕ ನ್ಯಾಯ ಅಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತರ ನೆರವಿಗೆ ಧಾವಿಸುವುದು, ದುಡಿಯುವ ಶಕ್ತಿ ಇಲ್ಲದವರ ನೆರವಿಗೆ ನಿಲ್ಲುವುದು, ಅಂಗವಿಕಲರ ನೆರವು ಕಲ್ಪಿಸುವುದು ಸಾಮಾಜಿಕ ನ್ಯಾಯ. ಈ ಪರಿಕಲ್ಪನೆಯಲ್ಕಿ ಮೀಸಲಾತಿಯನ್ನು ನೋಡಬೇಕು' ಎಂದು ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ತಿಳಿಸಿದರು.
‘ದೇಶದಲ್ಲಿ ಈಗ ಸೃಷ್ಟಿಯಾಗುತ್ತಿರುವ ಶೇ 98 ಉದ್ಯೋಗಗಳು ಖಾಸಗಿ ಕ್ಷೇತ್ರದವು. ಅಲ್ಲಿ ಮೀಸಲಾತಿ ಅನ್ವಯಿಸುವುದಿಲ್ಲ. ಇನ್ನುಳಿದ ಶೇ 2 ಉದ್ಯೋಗಗಳಲ್ಲಿ ಶೇ 1 ಎಸ್‌ಸಿ, ಎಸ್ಟಿ, ಒಬಿಸಿಗೆ ಹಾಗೂ ಶೇ 1 ಹುದ್ದೆಗಳು ಸಾಮಾನ್ಯ ವರ್ಗಕ್ಕೆ ಸಿಗುತ್ತಿವೆ. ಕೇಂದ್ರ, ರಾಜ್ಯ ಸರ್ಕಾರ ಹಾಗೂ ಪಿಎಸ್‌ಯುಗಳಲ್ಲಿ ಮೀಸಲಾತಿಯಡಿ ಮಂಜೂರಾದ 60 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ. ರಾಜ್ಯದಲ್ಲಿ ಎರಡೂವರೆ ಲಕ್ಷ ಹುದ್ದೆಗಳು ಖಾಲಿ ಇವೆ. ಬದಲಾಗಿ ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಯುತ್ತಿದ್ದು, ಇಲ್ಲಿ ಮೀಸಲಾತಿ ಅನ್ವಯ ಆಗುತ್ತಿಲ್ಲ. ಈ ಬಗ್ಗೆ ಯಾರಾದರೂ ಧ್ವನಿ ಎತ್ತಿದ್ದಾರೆಯೇ? ಏಕೆ ಈ ಮೌನ? ಈ ಬಗ್ಗೆ ಹೋರಾಟ ರೂಪಿಸಬೇಕಿದೆ, ಚರ್ಚೆ ನಡೆಯಬೇಕಿದೆ’ ಎಂದು ಕರೆ ನೀಡಿದರು.
'ಹೀಗಾಗಿ, ಮೀಸಲಾತಿ ನೀತಿಯನ್ನು ಪುನರ್ ರಚಿಸುವ ಅವಶ್ಯವಿದೆ. ಇದರರ್ಥ ಇದ್ದುದ್ದನ್ನು ಕಳೆದುಕೊಳ್ಳುವುದಲ್ಲ. ಬದಲಾಗಿ ಪರಿಣಾಮಕಾರಿಯಾಗಿ ಮರುರೂಪಿಸಬೇಕಿದೆ' ಎಂದರು.
‘ಜಗತ್ತಿನಲ್ಲಿ ಇಂದಿಗೂ ಜಾತಿ, ವರ್ಗ ಭೇದ ಜೀವಂತಾಗಿವೆ. ಆರ್ಥಿಕ, ರಾಜಕೀಯ, ಸಾಮಾಜಿಕ ಕ್ರೇತ್ರದಲ್ಲಿ ಅಸಮಾನತೆ ಇದೆ. ಅಸಮಾನತೆಯಿಂದ ಒಂದು ವರ್ಗದ ಜನರಿಗೆ ಲಾಭವಾಗಿದೆ. ಆದರೆ, ಮತ್ತೊಂದೆಡೆ ಶೋಷಣೆ ಮುಂದುವರಿದಿದೆ. ಕ್ರೌರ್ಯ ನೆಲೆಸಿದೆ' ಎಂದು ವಿಷಾದ ವ್ಯಕ್ತಪಡಿಸಿದರು.
'ಹಲವಾರು ಸಾಧನೆ ಮಾಡಿದ್ದೇವೆ. ಹೀಗಿದ್ದರೂ ಉದ್ದೇಶ ಈಡೇರಿಲ್ಲ. ಸಾಮಾಜಿಕ ನ್ಯಾಯ ಅನುಷ್ಠಾನಕ್ಕೆ ಮನಸ್ಸು ವೃದ್ಧಿಸಿಕೊಳ್ಳಬೇಕು. ಆಗ ಸಮ ಸಮಾಜ ನಿರ್ಮಾಣ ಸಾಧ್ಯ. ಆದರೆ, ಸಂವಿಧಾನ ತಿಳಿಯಪಡಿಸುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಜನರೂ ಪ್ರಯತ್ನಿಸಲಿಲ್ಲ. ಈ ನಿಟ್ಟಿನಲ್ಲಿ ಜನರಲ್ಲಿ ತಿಳುವಳಿಕೆ ತುಂಬಲು ನನ್ನ ಸಣ್ಣ ಪ್ರಯತ್ನ ನಡೆದಿದೆ’ ಎಂದರು.
‘ದೇಶದಲ್ಲಿ ಜಾತಿ ವ್ಯವಸ್ಥೆ ಇದೆ. ಒಟ್ಟಿಗೆ ಊಟ ಮಾಡುವಂತಿಲ್ಲ. ಸ್ಮಶಾನದಲ್ಲಿ ಊಳುವಂತಿಲ್ಲ. ವರ್ಗ ಅಸಮಾನತೆ, ಲಿಂಗ, ಸಾಂಸ್ಕೃತಿಕ ಅಸಮಾನತೆ ಇದೆ. ಅನೇಕರು ದ್ವನಿ ಎತ್ತಿದ್ದಾರೆ. ಎಲ್ಲರ ಧ್ವನಿ ಅಸಮಾನತೆ ತೊಲಗಿಸುವುದು’ ಎಂದು ನುಡಿದರು.
ಮಾನವ ಹಕ್ಕುಗಳು' ಕೃತಿ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, 'ಸಮಾಜದಲ್ಲಿ ಅಸಮಾನತೆ ಇದೆ. ಸಮಸ್ಯೆ ಅರ್ಥ ಮಾಡಿಕೊಂಡರೆ ಮಾತ್ರ ಪರಿಹಾರ, ನ್ಯಾಯ ಸಿಗುತ್ತದೆ. ಎಲ್ಲರಿಗೂ ಅರ್ಥವಾಗುವಂತೆ ಈ ಪುಸ್ತಕಗಳಲ್ಲಿ ಮಾಹಿತಿ ಇದೆ. ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ' ಎಂದರು.
ಉಪನ್ಯಾಸಕ, ಲೇಖಕ ಜೆ.ಜಿ.ನಾಗರಾಜ ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ಡಾ.ಅರಿವು ಶಿವಪ್ಪ ಹಾಗೂ ಜನ ಪ್ರಕಾಶನದ ಬಿ.ರಾಜಶೇಖರ್ ಮೂರ್ತಿ ಪ್ರಸ್ತಾವಿಕವಾಗಿ ಮಾತನಾಡಿದರು.
ವಾರಿಧಿ ಮಂಜುನಾಥರೆಡ್ಡಿ, ವಿ. ಗೀತಾ, ಅಬ್ಬಣಿ ಶಿವಪ್ಪ, ವಿಜಯಕುಮಾರ್, ಎಸ್.ಸತೀಶ್, ಧನರಾಜ್, ಜನ್ನಘಟ್ಟ ಕೃಷ್ಣಮೂರ್ತಿ, ವೆಂಕಟಾಚಲತಿ ಇದ್ದರು.