ಅಫ್ಘಾನಿಸ್ತಾನದ ಟ್ವೆಂಟಿ-20 ತಂಡದ ನಾಯಕತ್ವ ತ್ಯಜಿಸಿದ ಮುಹಮ್ಮದ್ ನಬಿ

ಅಡಿಲೇಡ್, ನ.4: ಆಸ್ಟ್ರೇಲಿಯ ವಿರುದ್ಧ ಸೋಲಿನೊಂದಿಗೆ ವಿಶ್ವಕಪ್ ಅಭಿಯಾನವನ್ನು ಅಂತ್ಯಗೊಳಿಸಿದ ಕೆಲವೇ ಗಂಟೆಗಳ ಬಳಿಕ ಆಲ್‌ರೌಂಡರ್ ಮುಹಮ್ಮದ್ ನಬಿ ಅಫ್ಘಾನಿಸ್ತಾನ ಟ್ವೆಂಟಿ-20 ತಂಡದ ನಾಯಕನ ಸ್ಥಾನವನ್ನು ತ್ಯಜಿಸಿದ್ದಾರೆ.
ಮ್ಯಾನೇಜ್‌ಮೆಂಟ್ ಹಾಗೂ ತಂಡಕ್ಕೆ ಅಗತ್ಯವಿದ್ದರೆ ದೇಶದ ಪರವಾಗಿ ಆಡುವುದನ್ನು ಮುಂದುವರಿಸುವೆ ಎಂದು 37ರ ಹರೆಯದ ನಬಿ ಹೇಳಿದ್ದಾರೆ.
‘‘ಕಳೆದ ಒಂದು ವರ್ಷದಿಂದ ನಮ್ಮ ತಂಡವು ನಾಯಕ ಬಯಸಿದ ರೀತಿಯಲ್ಲಿ ಹಾಗೂ ದೊಡ್ಡ ಟೂರ್ನಿಗೆ ಅಗತ್ಯವಿರುವ ಹಾಗೆ ತಯಾರಿ ನಡೆಸಿರಲಿಲ್ಲ. ಮ್ಯಾನೇಜರ್, ಆಯ್ಕೆ ಸಮಿತಿ ಹಾಗೂ ನನ್ನ ನಡುವೆ ಸಮನ್ವಯತೆ ಇರಲಿಲ್ಲ ಎಂದು ಟ್ವಿಟರ್‌ನಲ್ಲಿ ನಬಿ ತಿಳಿಸಿದ್ದಾರೆ.
ಇಂಗ್ಲೆಂಡ್ ಮಾಜಿ ಬ್ಯಾಟ್ಸ್‌ಮನ್ ಜೋನಾಥನ್ ಟ್ರಾಟ್‌ರಿಂದ ಕೋಚಿಂಗ್ ಪಡೆಯುತ್ತಿರುವ ಅಫ್ಘಾನ್ ತಂಡ ಸೂಪರ್-12 ಹಂತದಲ್ಲಿ ಒಂದೂ ಪಂದ್ಯವನ್ನು ಜಯಿಸಿಲ್ಲ. ಅಫ್ಘಾನ್ ಆಡಬೇಕಾಗಿದ್ದ ಎರಡು ಪಂದ್ಯಗಳು ಮಳೆಗಾಹುತಿಯಾದರೆ, 3ರಲ್ಲಿ ಸೋತಿತ್ತು.
ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹಾಗೂ ಆಫ್ ಸ್ಪಿನ್ನರ್ ಆಗಿರುವ ನಬಿ 2010ರಲ್ಲಿ ಅಫ್ಘಾನಿಸ್ತಾನದ ಪರ ಚೊಚ್ಚಲ ಪಂದ್ಯವನಾಡಿದ ಬಳಿಕ 104 ಟಿ-20 ಪಂದ್ಯಗಳನ್ನು ಆಡಿದ್ದಾರೆ.