ಗೂಗಲ್ ವಿಮರ್ಶೆಗಳನ್ನು ಸಾಕ್ಷ್ಯಾಧಾರ ಎಂದು ಪರಿಗಣಿಸಲಾಗದು: ಹೈಕೋರ್ಟ್ ಅಭಿಪ್ರಾಯ
ಬೆಂಗಳೂರು, ನ.4: ಗೂಗಲ್‍ನಲ್ಲಿ ಬರುವ ವಿಮರ್ಶೆಗಳು ಸಾಕ್ಷ್ಯಾಧಾರಗಳನ್ನಾಗಿ ಪರಿಗಣಿಸಲಾಗದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್(High Court of Karnataka), ಒಪ್ಪಂದದಂತೆ ಸರಕುಗಳನ್ನು ಪೂರೈಕೆ ಮಾಡದ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿದ್ದ ಕೇಸ್‍ನಲ್ಲಿ ಜಾಮೀನು ಮಂಜೂರು ಮಾಡಿದೆ.
ರಾಮನಗರದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೇಸ್‍ನಲ್ಲಿ ಬಂಧನ ಭೀತಿಯಲ್ಲಿದ್ದ ಮುಂಬೈ ಮೂಲದ ಓಂಪ್ರತಾಪ್‍ಸಿಂಗ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಷರತ್ತು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಅರ್ಜಿದಾರರ ವಿರುದ್ಧ ದೂರು ದಾಖಲಿಸುವುದಕ್ಕೂ ಮುನ್ನ ಗೂಗಲ್‍ನಲ್ಲಿ ಪರಿಶೀಲನೆ ನಡೆಸಲಾಯಿತು. ಆದರೆ, ಓಂ ಪ್ರತಾಪ್ ಅವರು ಈಗಾಗಲೇ ಹಲವು ಜನರಿಗೆ ವಂಚನೆ ಮಾಡಲಾಗಿದೆ ಎಂದು ವಿಮರ್ಶಿಸಲಾಗಿದೆ. ಹೀಗಾಗಿ ಅರ್ಜಿದಾರ ಓಂ ಪ್ರಕಾಶ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ. ಆದರೆ, ಗೂಗಲ್ ವಿಮರ್ಶೆಗಳನ್ನು ಸಾಕ್ಷ್ಯಗಳನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಪ್ರಕರಣವೇನು?: ರಾಮನಗರದಲ್ಲಿ ದೀಪದ ಎಣ್ಣೆ ಉದ್ಯಮ ನಡೆಸುತ್ತಿರುವ ಪವಿತ್ರಾ ಎಂಬುವರು ಮುಂಬೈ ಮೂಲದ ಸಂಸ್ಥೆಯೊಂದಿಗೆ ಲಿಕ್ವಿಡ್ ಫ್ಯಾರಾಫೈನ್ ಖರೀದಿಸುವ ವ್ಯಾಪಾರ ನಡೆಸುತ್ತಿದ್ದರು. ಅಲ್ಲದೆ, ಈ ಮೊದಲು ಸುಮಾರು 26 ಲಕ್ಷ ರೂ ಗಳಿಗೆ ಖರೀದಿಯನ್ನು ಮಾಡಿದ್ದರು. ಆದರೆ, ಮತ್ತೆ 26 ಲಕ್ಷ ರೂ ಗಳಿಗೆ ಮನವಿ ಸಲ್ಲಿಸಿ ಹಣ ಸಂದಾಯವನ್ನೂ ಮಾಡಿದ್ದರು. ಆದರೆ, ಡೈಮಂಡ್ ಪೆಟ್ರೋಲಿಂ ಪೂರೈಕೆ ಮಾಡಿರಲಿಲ್ಲ.
ಆ ಬಳಿಕ ಗೂಗಲ್‍ನಲ್ಲಿ ಪರಿಶೀಲಿಸಿದಾಗ ಸಂಸ್ಥೆಯ ಮಾಲಕ ಓಂ ಪ್ರತಾಪ್ ಸಿಂಗ್ ಅವರು ಹಲವರಿಗೆ ವಂಚಿಸಿದ್ದಾರೆ ಎಂಬುದಾಗಿ ವಿಮರ್ಶೆ ಇತ್ತು. ಹೀಗಾಗಿ, ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದ್ದರು.