ಭಾರತದ ಫುಟ್ಬಾಲ್ ಬದಲಾವಣೆಯ ಹಾದಿಯಲ್ಲಿ...

ಭಾರತದ ಮಾಜಿ ಗೋಲ್ ಕೀಪರ್ ಕಲ್ಯಾಣ್ ಚೌಬೆ ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್)ನ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡು 100 ದಿನ ಪೂರೈಸುವಷ್ಟರಲ್ಲಿ ಭವಿಷ್ಯದಲ್ಲಿ ಭಾರತದ ಫುಟ್ಬಾಲ್‌ನ ಅಭಿವೃದ್ಧಿಗೆ ಸಂಬಂಧಿಸಿ ಸ್ಪಷ್ಟವಾದ ಯೋಜನೆಯನ್ನು ಸಿದ್ಧಪಡಿಸುವುದಾಗಿ ಪ್ರಕಟಿಸಿದ್ದರು. ಇದೀಗ ಚೌಬೆ ತಂಡ ಈ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ ಫಿಫಾ ಮತ್ತು ಎಎಫ್‌ಸಿ ಭಾರತದ ಫುಟ್ಬಾಲ್‌ನ ಭವಿಷ್ಯ ರೂಪಿಸಲು ಸಹಕರಿಸಲಿದೆ. ಕೆಲವೇ ದಿನಗಳಲ್ಲಿ ಖತರ್‌ನಲ್ಲಿ ಫುಟ್ಬಾಲ್ ವಿಶ್ವಕಪ್ (ನ.20ರಿಂದ ಡಿ.18) ನಡೆಯಲಿರುವ ಹಿನ್ನೆಲೆಯಲ್ಲಿ ಜಾಗತಿಕ ಫುಟ್ಬಾಲ್ ಕೂಟ ಮತ್ತು ಏಶ್ಯ ಫುಟ್ಬಾಲ್ ಸಂಸ್ಥೆಯ ಅಧಿಕಾರಿಗಳು ಬ್ಯುಸಿಯಾಗಿದ್ದಾರೆ. ಈ ಕಾರಣದಿಂದಾಗಿ ಭಾರತದ ಫುಟ್ಬಾಲ್ ಸಂಸ್ಥೆಯ ಯೋಜನೆ ಸಿದ್ಧವಾಗಿಲ್ಲ. ಈ ನಿಟ್ಟಿನಲ್ಲಿ ಪ್ರಯತ್ನ ಆರಂಭಗೊಂಡಿದೆ ಎಂದು ಭಾರತದ ಫುಟ್ಬಾಲ್ ಸಂಸ್ಥೆಯ ಮೂಲಗಳು ತಿಳಿಸಿವೆ.
ಮೂರನೇ ವ್ಯಕ್ತಿಯ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ಭಾರತದ ಫುಟ್ಬಾಲ್ ಸಂಸ್ಥೆಯನ್ನು ಆಗಸ್ಟ್‌ನಲ್ಲಿ ಫಿಫಾ ಅಮಾನತುಗೊಳಿಸಿತ್ತು. ಆದರೆ ಕೇವಲ 11 ದಿನಗಳಲ್ಲಿ ಈ ಅಮಾನತು ಅದೇಶವನ್ನು ಹಿಂಪಡೆಯುವುದರೊಂದಿಗೆ ಭಾರತದ ಫುಟ್ಬಾಲ್‌ಗೆ ಕವಿದ ಕಾರ್ಮೋಡ ಮರೆಯಾಗಿತ್ತು. ಅಮಾನತು ರದ್ದಾದ ಹಿನ್ನೆಲೆಯಲ್ಲಿ ಈ ಹಿಂದೆ ನಿಗದಿಯಾಗಿದ್ದ ಫಿಫಾ ಅಂಡರ್ -19 ವನಿತೆಯರ ವಿಶ್ವಕಪ್‌ನ ಆತಿಥ್ಯಕ್ಕೆ ಭಾರತಕ್ಕೆ ಯಾವುದೇ ಸಮಸ್ಯೆ ಉಂಟಾಗಲಿಲ್ಲ. ಆದರೆ ಭಾರತದ ಫುಟ್ಬಾಲ್ ಈ ಕೂಟದಲ್ಲಿ ಏನನ್ನು ಸಾಧಿಸಲಿಲ್ಲ. ಆಡಿರುವ ಮೂರು ಪಂದ್ಯಗಳಲ್ಲೂ ಸೋಲು ಅನುಭವಿಸಿ, ಕೂಟದಲ್ಲಿ ಕೊನೆಯ ಸ್ಥಾನ(16) ಪಡೆಯಿತು. ಸ್ಪೇನ್ ತಂಡ ಎರಡನೇ ಬಾರಿ ಚಾಂಪಿಯನ್ ಆಗಿದೆ. ಆಡಿದ್ದ ಮೂರು ಪಂದ್ಯಗಳ ಪೈಕಿ ಭಾರತದ ಆಟಗಾರ್ತಿಯರಿಗೆ ಒಂದು ಗೋಲನ್ನೂ ಗಳಿಸಲು ಸಾಧ್ಯವಾಗಲಿಲ್ಲ. ಮೊರಾಕ್ಕೊ ವಿರುದ್ಧ 0-3, ಬ್ರೆಝಿಲ್ ವಿರುದ್ಧ 0-5 ಮತ್ತು ಅಮೆರಿಕ ವಿರುದ್ಧ 0-8 ಅಂತರದಿಂದ ಹೀನಾಯ ಸೋಲು ಅನುಭವಿಸಿತು.
ಇಂದು ದೇಶದಲ್ಲಿ ಫುಟ್ಬಾಲ್ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಫಿಫಾ ರ್ಯಾಂಕಿಂಗ್‌ನಲ್ಲಿ 104ನೇ ಸ್ಥಾನದಲ್ಲಿದೆ. ಸುಮಾರು 20 ಕೋಟಿ ಫುಟ್ಬಾಲ್ ಅಭಿಮಾನಿಗಳು ಭಾರತದಲ್ಲಿದ್ದಾರೆ. ಇದುವರೆಗೆ ರಾಜಕಾರಣಿಗಳು, ಉದ್ಯಮಿಗಳು ಭಾರತದ ಫುಟ್ಬಾಲ್‌ನ್ನು ನಿಯಂತ್ರಿಸುತ್ತಿದ್ದರು. ಇದೀಗ ಮೊದಲ ಬಾರಿಗೆ ಮಾಜಿ ಆಟಗಾರ ಚೌಬೆ ನೇತೃತ್ವದಲ್ಲಿ ಫುಟ್ಬಾಲ್‌ನ ಅಭಿವೃದ್ಧಿಗೆ ಎಐಎಫ್‌ಎಫ್ ಮುಂದಾಗಿದೆ. ಕಲ್ಯಾಣ್ ಚೌಬೆ ಅವರು ಮೋಹನ್ ಬಗಾನ್ ಮತ್ತು ಈಸ್ಟ್ ಬೆಂಗಾಲ್ ಕ್ಲಬ್‌ನ ಗೋಲ್‌ಕೀಪರ್ ಆಗಿದ್ದರು. ಇದೀಗ ಅವರ ತಂಡದಲ್ಲಿ ಮಾಜಿ ಆಟಗಾರರು ಮತ್ತು ಆಟಗಾರ್ತಿಯರೂ ಇದ್ದಾರೆ. ಭಾರತೀಯ ಫುಟ್ಬಾಲ್ ನಿರ್ಣಾಯಕ ಘಟ್ಟದಲ್ಲಿದೆ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್‌ನ ಹೊಸ ಪ್ರಧಾನ ಕಾರ್ಯದರ್ಶಿ ಶಾಜಿ ಪ್ರಭಾಕರನ್ ಹೇಳಿದ್ದಾರೆ.
ಮಾಜಿ ರಾಷ್ಟ್ರೀಯ ಆಟಗಾರರು ಭಾರತೀಯ ಫುಟ್ಬಾಲ್ ಅಭಿವೃದ್ಧಿಗೆ ಕೊಡುಗೆ ನೀಡಲು ಉತ್ಸುಕರಾಗಿದ್ದಾರೆ ಎಂದು ಫಿಫಾ ಮಾಜಿ ಪ್ರಾದೇಶಿಕ ಅಭಿವೃದ್ಧಿ ಅಧಿಕಾರಿ ಪ್ರಭಾಕರನ್ ಅಭಿಪ್ರಾಯಪಟ್ಟಿದ್ದಾರೆ. ಫಿಫಾ ಅಂಡರ್ -17 ವನಿತೆಯರ ವಿಶ್ವಕಪ್‌ನಲ್ಲಿ ಭಾರತದ ಹೀನಾಯ ಸೋಲು ಇದೀಗ ಭಾರತದ ಫುಟ್ಬಾಲ್‌ನ ಭವಿಷ್ಯದ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಾದ ತುರ್ತು ಬಂದಿದೆ. ಹೊಸ ಎಐಎಫ್‌ಎಫ್ ಅಧಿಕಾರಿಗಳು ದೀರ್ಘಾವಧಿಯ ಯೋಜನೆಯಾಗಿ ದೇಶದಲ್ಲಿ ಫುಟ್ಬಾಲ್‌ನ ಅಭಿವೃದ್ಧಿಯ ಕೆಲಸವನ್ನು ಪ್ರಾರಂಭಿಸಿದ್ದಾರೆ. ಇದರಲ್ಲಿ ತಳಮಟ್ಟದ ಅಭಿವೃದ್ಧಿ, ಮೂಲಸೌಕರ್ಯ, ದೊಡ್ಡ ಮೇಜರ್ ಟೂರ್ನಮೆಂಟ್‌ಗಳನ್ನು ಆಯೋಜಿಸುವುದು, ಲೀಗ್ ಅಭಿವೃದ್ಧಿ, ಯುವ ಅಭಿವೃದ್ಧಿ, ಮಹಿಳಾ ಫುಟ್ಬಾಲ್ ಮತ್ತು ವಿಶ್ವ ದರ್ಜೆಯ ಕೋಚ್‌ಗಳ ತಯಾರಿ ಮುಂತಾದ ಯೋಜನೆಗಳನ್ನು ರೂಪಿಸಲಾಗುತ್ತಿದೆ. 36 ರಾಜ್ಯಗಳ ಫುಟ್ಬಾಲ್ ಸಂಸ್ಥೆಗಳನ್ನು ಬಲಪಡಿಸುವುದು ಪ್ರಾಥಮಿಕ ಗುರಿಯಾಗಿದೆ.
ಪುರುಷ ಮತ್ತು ಮಹಿಳಾ ಫುಟ್ಬಾಲ್‌ಗೆ ಸಮಾನ ಗಮನ ನೀಡಲಾಗುವುದು ಎಂದು ಹೇಳಿರುವ ಪ್ರಭಾಕರನ್, ಕೇಂದ್ರ ಸರಕಾರ, ರಾಜ್ಯ ಸಂಘಗಳು, ಲೀಗ್ ಪಾಲುದಾರರು, ಕ್ಲಬ್‌ಗಳು ಮತ್ತು ಮಾರುಕಟ್ಟೆ ಪಾಲುದಾರರ ಬೆಂಬಲದೊಂದಿಗೆ ಸಿದ್ಧಪಡಿಸುತ್ತಿರುವ ಅಭಿವೃದ್ಧಿ ಕಾರ್ಯತಂತ್ರದ ಬಗ್ಗೆ ವಿವರಿಸಿದ್ದಾರೆ. ಫುಟ್ಬಾಲ್ ಅನ್ನು ವಿಶ್ವದರ್ಜೆಯ ಗುಣಮಟ್ಟಕ್ಕೆ ಅಭಿವೃದ್ಧಿಪಡಿಸಲು ಅಗತ್ಯವಾದ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಸವಾಲಾಗಿದೆ. ಎಐಎಫ್‌ಎಫ್‌ನ ಪ್ರಸಕ್ತ ಬಜೆಟ್ 90 ಕೋಟಿ ರೂ.ಗಳಾಗಿದ್ದು, ಯೋಜನೆ ಕಾರ್ಯಗತಗೊಳಿಸಲು ಫೆಡರೇಶನ್‌ಗೆ ರೂ. 1,000 ಕೋಟಿ ಅಗತ್ಯವಿದೆ.
ಏಶ್ಯದಲ್ಲಿ ದಕ್ಷಿಣ ಕೊರಿಯಾ, ಜಪಾನ್, ಸೌದಿ ಅರೇಬಿಯಾ ಮತ್ತು ಇರಾನ್‌ನಂತಹ ಪ್ರಮುಖ ಫುಟ್ಬಾಲ್ ರಾಷ್ಟ್ರಗಳು ವಿಶ್ವಕಪ್‌ನಂತಹ ದೊಡ್ಡ ಪಂದ್ಯಾಟಗಳಲ್ಲಿ ಸ್ಪರ್ಧಿಸಲು ತಮ್ಮ ಗುಣಮಟ್ಟ ಕಾಪಾಡಿಕೊಳ್ಳಲು ಹೆಚ್ಚು ಖರ್ಚು ಮಾಡುತ್ತವೆ. ಸೌದಿ ಅರೇಬಿಯಾ ಮತ್ತು ಇರಾನ್ ಪ್ರತೀ ವರ್ಷ ಫುಟ್ಬಾಲ್‌ಗಾಗಿ 200 ಮಿಲಿಯನ್ (ಸುಮಾರು 1,650 ಕೋಟಿ ರೂ.) ಹಣವನ್ನು ವಿನಿಯೋಗಿಸುತ್ತವೆ.
ಭಾರತದಲ್ಲಿ ಫುಟ್ಬಾಲ್‌ನಲ್ಲಿ ಪಶ್ಚಿಮ ಬಂಗಾಳ, ಕೇರಳ, ಗೋವಾ, ಸಿಕ್ಕಿಂ ಮತ್ತು ಪಂಜಾಬ್ ಬಲಿಷ್ಠವಾಗಿವೆ. ಉಳಿದ ರಾಜ್ಯಗಳನ್ನು ಫುಟ್ಬಾಲ್‌ನತ್ತ ಆಕರ್ಷಿಸುವುದು ದೊಡ್ಡ ಸವಾಲಾಗಿದೆ. ಭಾರತದಲ್ಲಿ ಈ ಕ್ರೀಡೆಯನ್ನು ಅಭಿವೃದ್ಧಿಪಡಿಸಲು ಇದುವರೆಗೆ ಸರಿಯಾದ ಯೋಜನೆ ಇರಲಿಲ್ಲ. ಇಂಡಿಯನ್ ಸೂಪರ್ ಲೀಗ್ ಅವಧಿಯು ಆರು ತಿಂಗಳುಗಳು ಮತ್ತು ಎರಡನೇ ಹಂತದ ಐ-ಲೀಗ್ ಅನ್ನು ಐದು ತಿಂಗಳ ಕಾಲ ಆಡಲಾಗುತ್ತದೆ. ಇಂಡಿಯನ್ ವುಮೆನ್ಸ್ ಲೀಗ್ ಅವಧಿ ಎರಡು ತಿಂಗಳು. ಇದೀಗ ಲೀಗ್ ಅವಧಿಯನ್ನು ಹೆಚ್ಚಿಸುವ ಕುರಿತು ಚೌಬೆ ತಂಡ ಚಿಂತಿಸುತ್ತಿದೆ. ಆಟಗಾರರು ಕೇವಲ 6 ತಿಂಗಳು ಮಾತ್ರ ಫುಟ್ಬಾಲ್ ಆಡಿದರೆ ಸಾಲದು. ಕ್ಲಬ್‌ಗಳು ಅಥವಾ ರಾಷ್ಟ್ರೀಯ ತಂಡದ ಆಟಗಾರರು ಎಲ್ಲ ಸಮಯದಲ್ಲೂ ಆಟದಲ್ಲಿ ತೊಡಗಿಸಿಕೊಂಡರೆ ಮಾತ್ರ ಭಾರತದ ಫುಟ್ಬಾಲ್‌ನಲ್ಲಿ ಸುಧಾರಣೆ ಸಾಧ್ಯ ಎಂಬುದು ಚೌಬೆ ತಂಡದ ನಿಲುವಾಗಿದೆ.
ದೇಶದಲ್ಲಿ ಪ್ರತಿಭೆಗೆ ಕೊರತೆಯಿಲ್ಲ, ಆದರೆ ಅವಕಾಶಗಳ ಕೊರತೆಯಿದೆ. ಭಾರತ ಪುರುಷರ ತಂಡವು 2024ರ ಏಶ್ಯಕಪ್‌ಗೆ ಅರ್ಹತೆ ಪಡೆದಿದೆ. 1998ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನ ಗಳಿಸಿದ್ದ ಕ್ರೊಯೇಶಿಯಾ ತಂಡದ ಸದಸ್ಯರಾಗಿದ್ದ ಇಗೊರ್ ಸ್ಟಿಮಾಕ್ ಇದೀಗ ಭಾರತ ತಂಡದ ಕೋಚ್ ಆಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ ನಾಯಕ ಸುನಿಲ್ ಛೆಟ್ರಿ ನಾಯಕತ್ವದಲ್ಲಿ ಭಾರತದ ತಂಡ ಏಶ್ಯಕಪ್‌ಗೆ ತಯಾರಿ ನಡೆಸುತ್ತಿದೆ.







