ಆಂಧ್ರ: ಹಾಸ್ಟೆಲ್ ಕೊಠಡಿಯೊಳಗೆ ವಿದ್ಯಾರ್ಥಿಗೆ ನಿರ್ದಯವಾಗಿ ಥಳಿತ, ನಾಲ್ವರು ವಿದ್ಯಾರ್ಥಿಗಳ ಸೆರೆ

ಹೈದರಾಬಾದ್: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಹಾಸ್ಟೆಲ್ ಕೊಠಡಿಯೊಳಗೆ ಇನ್ನೋರ್ವ ವಿದ್ಯಾರ್ಥಿ ಬೇಡಿಕೊಂಡರೂ ನಿರ್ದಯವಾಗಿ ಥಳಿಸಿದ ವೀಡಿಯೊ ವೈರಲ್ ಆಗಿದೆ.
ವಿದ್ಯಾರ್ಥಿ ಕ್ಷಮೆ ಯಾಚಿಸುತ್ತಾ, ತನ್ನನ್ನು ಬಿಡುವಂತೆ ಬೇಡಿಕೊಳ್ಳುತ್ತಿದ್ದರೂ ಹಲ್ಲೆಕೋರರು ವಿದ್ಯಾರ್ಥಿಯನ್ನು ದೊಣ್ಣೆಗಳಿಂದ ಹೊಡೆಯುತ್ತಲೇ ಇರುವುದು ಘಟನೆಯ ವೀಡಿಯೊದಲ್ಲಿ ಕಂಡುಬಂದಿದೆ. ವಿದ್ಯಾರ್ಥಿಯ ಅಂಗಿ ಹರಿದಂತೆ ಕಾಣುತ್ತಿದ್ದು, ಹಾಗೂ ಅಂಗಿಯನ್ನು ತೆಗೆಯುವಂತೆ ಒತ್ತಾಯಿಸಲಾಗುತ್ತದೆ.
ಹಲ್ಲೆಗೀಡಾದ ವಿದ್ಯಾರ್ಥಿ ಹಾಗೂ ಎಲ್ಲಾ ಆರೋಪಿಗಳು ಎಸ್‌ಆರ್‌ಕೆಆರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದು, ಘಟನೆ ಒಂದೆರಡು ದಿನಗಳ ಹಿಂದೆ ನಡೆದಿದೆ ಎಂದು ವರದಿಯಾಗಿದೆ.
ಸಂತ್ರಸ್ತ ವಿದ್ಯಾರ್ಥಿ ಅಂಕಿತ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ದೇಹದಾದ್ಯಂತ ಗಾಯಗಳಾಗಿವೆ. ಆತನ ಎದೆ ಮತ್ತು ಕೈಗಳಲ್ಲಿ ಸುಟ್ಟ ಗಾಯಗಳಿವೆ.
ನಾಲ್ವರು ದಾಳಿಕೋರರು ಇಸ್ತ್ರಿಪೆಟ್ಟಿಗೆಯಿಂದ ಅಂಕಿತನ ಮೈ ಸುಟ್ಟಿದ್ದು, ದೊಣ್ಣೆ ಹಾಗೂ ಪಿವಿಸಿ ಪೈಪ್‌ಗಳಿಂದ ಹೊಡೆದಿದ್ದಾರೆ ಎಂದು ಶಂಕಿಸಲಾಗಿದೆ.
ಬಾಲಕರು ಖಾಸಗಿ ಹಾಸ್ಟೆಲ್‌ನಲ್ಲಿ ವಾಸವಾಗಿದ್ದರೂ ಕಾಲೇಜು ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯನ್ನು ವಿಚಾರಣೆ ನಡೆಸಲಾಗುತ್ತಿದೆ.