ಶೇ 50 ಟ್ವಿಟರ್ ಉದ್ಯೋಗಿಗಳನ್ನು ಕೈಬಿಟ್ಟ ಎಲಾನ್ ಮಸ್ಕ್; ಭಾರತದಲ್ಲೂ ಹಲವರ ಉದ್ಯೋಗ ನಷ್ಟ
ಪ್ರತಿ ದಿನ 4 ಮಿಲಿಯನ್ ಡಾಲರ್ ನಷ್ಟ ಅನುಭವಿಸುತ್ತಿರುವ ಟ್ವಿಟರ್
ಹೊಸದಿಲ್ಲಿ: ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ಅವರು ಟ್ವಿಟರ್ನ (Twitter) ನೂತನ ಬಾಸ್ ಆದ ಬೆನ್ನಿಗೇ ಉದ್ಯೋಗಿಗಳಲ್ಲಿ ಕಾಡುತ್ತಿದ್ದ ಆತಂಕ ನಿಜವಾಗಿದ್ದು ತನ್ನ ಶೇ 50 ರಷ್ಟು ಉದ್ಯೋಗಿಗಳನ್ನು ಕೈಬಿಟ್ಟಿರುವುದಾಗಿ ಟ್ವಿಟರ್ ಇಂದು ಹೇಳಿದೆ.
ಸಂಸ್ಥೆಯು ಪ್ರತಿ ದಿನ 4 ಮಿಲಿಯನ್ ಡಾಲರ್ ನಷ್ಟ ಅನುಭವಿಸುತ್ತಿರುವುದರಿಂದ ಉದ್ಯೋಗಿಗಳನ್ನು ಕೈಬಿಡದೆ ಬೇರೆ ದಾರಿಯಿಲ್ಲ ಎಂದು ಮಸ್ಕ್ ಹೇಳಿದ್ದಾರೆ. ಕೆಲ ಹೋರಾಟ ಸಂಘಟನೆಗಳು ಜಾಹೀರಾತುದಾರರ ಮೇಲೆ ಹೇರುತ್ತಿರುವ ಒತ್ತಡವೇ ನಷ್ಟಗಳಿಗೆ ಕಾರಣ ಎಂದು ಮಸ್ಕ್ ಹೇಳಿದ್ದಾರೆ.
ಟ್ವಿಟರ್ನ ಶೇ. 75 ಉದ್ಯೋಗಿಗಳನ್ನು ಕೈಬಿಡುವ ಉದ್ದೇಶವನ್ನು ಮಸ್ಕ್ ಇಟ್ಟುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಮಸ್ಕ್ ಅವರು ಟ್ವಿಟರ್ನ ಏಕೈಕ ನಿರ್ದೇಶಕರಾಗಿದ್ದಾರೆ ಎಂದು ಅಮೆರಿಕದ ಸೆಕ್ಯುರಿಟೀಸ್ ಎಂಡ್ ಎಕ್ಸ್ಚೇಂಜ್ ಕಮಿಷನ್ಗೆ ನೀಡಲಾದ ಮಾಹಿತಿಯಲ್ಲಿ ತಿಳಿಸಲಾಗಿದೆ.
ಸುಳ್ಳು ಸುದ್ದಿ ಹಾಗೂ ಹಾನಿಯುಂಟು ಮಾಡಬಹುದಾದ ಸುದ್ದಿಯನ್ನು ತಡೆಯುವ ಜವಾಬ್ದಾರಿ ಹೊತ್ತಿದ್ದ ಟ್ವಿಟರ್ನ ಟ್ರಸ್ಟ್ ಮತ್ತು ಸೇಫ್ಟಿ ತಂಡದ ಶೇ.15 ರಷ್ಟು ಉದ್ಯೋಗಿಗಳನ್ನು ಕೈಬಿಡಲಾಗಿದೆ ಎಂದು ಈ ಘಟಕದ ಮುಖ್ಯಸ್ಥರಾದ ಯೋಯೆಲ್ ರೊತ್ ಇಂದು ಹೇಳಿದ್ದಾರೆ.
ಭಾರತದಲ್ಲಿ ಟ್ವಿಟರ್ ನ ಮಾರಾಟ, ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗಗಳ ಬಹುತೇಕ ಎಲ್ಲಾ ಉದ್ಯೋಗಿಗಳನ್ನು ಕೈಬಿಡಲಾಗಿದೆ ಎಂಬ ಮಾಹಿತಿ ಇದೆ. ಈ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿಲ್ಲವಾದರೂ ಹಲವು ಉದ್ಯೋಗಿಗಳು ವಜಾಗೊಂಡ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ಧಾರೆ.