ರಶ್ಯ ಕೆಫೆಯಲ್ಲಿ ಅಗ್ನಿ ಅನಾಹುತ, 15 ಜನರು ಮೃತ್ಯು

ಮಾಸ್ಕೊ, ನ.5: ರಶ್ಯದ ಕೊಸ್ತ್ರೋಮ ನಗರದ ಕೆಫೆಯೊಂದರಲ್ಲಿ ಶನಿವಾರ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 15 ಮಂದಿ ಮೃತಪಟ್ಟಿದ್ದು ಇತರ 5 ಮಂದಿ ಗಾಯಗೊಂಡಿದ್ದಾರೆ. ಬೆಂಕಿಯಿಂದ ಹೊತ್ತಿ ಉರಿಯುತ್ತಿರುವ ಕೆಫೆಯಿಂದ ಕನಿಷ್ಟ 250 ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಕೆಫೆಯಲ್ಲಿ ಎರಡು ತಂಡಗಳ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ಆ ಸಂದರ್ಭ ಒಬ್ಬ ತನ್ನ ಬಳಿಯಿದ್ದ ಫ್ಲೇರ್‌ಗನ್(ಬೆಂಕಿಯ ಜ್ವಾಲೆ ಉಗುಳುವ ಪಿಸ್ತೂಲ್) ಬಳಸಿದಾಗ ಹಾರಿದ ಬೆಂಕಿಯ ಕಿಡಿ ಕೆಫೆಯ ಪೀಠೋಪಕರಣಕ್ಕೆ ತಗುಲಿ ಬೆಂಕಿ ಹತ್ತಿಕೊಂಡಿದೆ ಎಂದು ಕೊಸ್ತ್ರೋಮ ವಲಯದ ಗವರ್ನರ್ ಸೆರ್ಗೆಯ್ ಸಿಟಿನ್‌ಕೋವ್ ಹೇಳಿದ್ದಾರೆ.
ದುರಂತದಲ್ಲಿ ಕೆಫೆಯ ಛಾವಣಿ ಕುಸಿದು ಬಿದ್ದಿದೆ. ಗಾಯಗೊಂಡ ಐದು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಅವರು ಚೇತರಿಸಿಕೊಂಡಿದ್ದಾರೆ. ಕ್ರಿಮಿನಲ್ ಪ್ರಕರಣ ದಾಖಲಿಸಿದ್ದು, ಫ್ಲೇರ್‌ಗನ್ ಬಳಸಿದ ವ್ಯಕ್ತಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
Next Story