ಭಾರತೀಯರನ್ನು ಹಾಡಿಹೊಗಳಿದ ರಶ್ಯ ಅಧ್ಯಕ್ಷ ಪುಟಿನ್

ಮಾಸ್ಕೋ: ರಶ್ಯ (Russia) ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರು ಭಾರತ ಮತ್ತು ಭಾರತೀಯರನ್ನು ಹಾಡಿಹೊಗಳಿದ್ದಾರೆ. ಭಾರತೀಯರನ್ನು ಪ್ರತಿಭಾವಂತರು ಹಾಗೂ ಪರಿಶ್ರಮ ಜೀವಿಗಳು ಮತ್ತು ಅಭೂತಪೂರ್ವ ಸಾಧನೆಗಳನ್ನು ಮಾಡುವ ಸಾಮರ್ಥ್ಯ ಹೊಂದಿದವರು ಎಂದು ಪುಟಿನ್ ಬಣ್ಣಿಸಿದ್ದಾರೆ.
ರಶ್ಯನ್ ಏಕತಾ ದಿನದ ಅಂಗವಾಗಿ ಶುಕ್ರವಾರ ನಡೆದ ಸಮಾರಂಭದಲ್ಲಿ ಮಾತನಾಡಿದ ಪುಟಿನ್, ರಶ್ಯದ ಮಿತ್ರ ದೇಶವಾದ ಭಾರತದ ಶಕ್ತಿಸಾಮರ್ಥ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ʻʻನಾವು ಭಾರತದತ್ತ ನೋಡೋಣ, ಪ್ರತಿಭಾವಂತ, ಪರಿಶ್ರಮ ಪಡುವ ಜನರು. ಅಭಿವೃದ್ಧಿಯ ವಿಚಾರದಲ್ಲಿ ಅಭೂತಪೂರ್ವ ಸಾಧನೆಗಳನ್ನು ಭಾರತ ನಿಸ್ಸಂಶಯವಾಗಿ ಮಾಡಲಿದೆ. ಮತ್ತು ಒಂದೂವರೆ ಬಿಲಿಯನ್ ಜನರು. ಅದೇ ಅವರ ಸಾಮರ್ಥ್ಯ," ಎಂದು ಪುಟಿನ್ ಹೇಳಿದ್ದಾರೆ.
ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಮುಂದಿನ ವಾರ ರಶ್ಯಗೆ ಎರಡು ದಿನಗಳ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಪುಟಿನ್ ಅವರ ಹೇಳಿಕೆ ಮಹತ್ವ ಪಡೆದಿದೆ.
ಇದನ್ನೂ ಓದಿ: ಗುಜರಾತ್: ಮೊರ್ಬಿ ಸೇತುವೆ ದುರಸ್ತಿಗೆ ರೂ. 2 ಕೋಟಿ ಮಂಜೂರಾಗಿದ್ದರೂ ಸಂಸ್ಥೆ ಬಳಸಿದ್ದು ಕೇವಲ ರೂ.12 ಲಕ್ಷ







