ಟ್ವೆಂಟಿ-20 ವಿಶ್ವಕಪ್: ಶ್ರೀಲಂಕಾವನ್ನು ಮಣಿಸಿದ ಇಂಗ್ಲೆಂಡ್ ಸೆಮಿ ಫೈನಲ್‌ಗೆ ಲಗ್ಗೆ
ಆಸ್ಟ್ರೇಲಿಯ ಟೂರ್ನಿಯಿಂದ ನಿರ್ಗಮನ

ಸಿಡ್ನಿ, ನ.5: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಸೂಪರ್-12ರ ಸುತ್ತಿನ ಗ್ರೂಪ್-1ರ ಪಂದ್ಯದಲ್ಲಿ ಶ್ರೀಲಂಕಾವನ್ನು 4 ವಿಕೆಟ್‌ಗಳ ಅಂತರದಿಂದ ಮಣಿಸಿದ ಇಂಗ್ಲೆಂಡ್ ತಂಡ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಹೀಗಾಗಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯದ ಸೆಮಿ ಫೈನಲ್ ಆಸೆ ಕಮರಿಹೋಗಿದೆ.
ಶನಿವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತು. ಗೆಲ್ಲಲು ಸಾಧಾರಣ ಸವಾಲು ಪಡೆದ ಇಂಗ್ಲೆಂಡ್ 19.4 ಓವರ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತು.
ಲಹಿರು ಕುಮಾರ ಬೌಲಿಂಗ್‌ನಲ್ಲಿ ಕ್ರಿಸ್ ವೋಕ್ಸ್ ಬೌಂಡರಿ ಬಾರಿಸುವ ಮೂಲಕ ಗೆಲುವಿನ ರನ್ ದಾಖಲಿಸಿದರು.
ಈ ಗೆಲುವಿನೊಂದಿಗೆ ಒಟ್ಟು 7 ಅಂಕ ಗಳಿಸಿ ಗ್ರೂಪ್-1ರಲ್ಲಿ ಎರಡನೇ ಸ್ಥಾನ ಪಡೆದ ಇಂಗ್ಲೆಂಡ್ ತಂಡ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ನ್ಯೂಝಿಲ್ಯಾಂಡ್ ಈಗಾಗಲೇ ಗುಂಪಿನ ಅಗ್ರಸ್ಥಾನಿಯಾಗಿ ಸೆಮಿ ಫೈನಲ್‌ಗೆ ತಲುಪಿದ ಮೊದಲ ತಂಡ ಎನಿಸಿಕೊಂಡಿದೆ. ಚಾಂಪಿಯನ್ ಆಸ್ಟ್ರೇಲಿಯ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದು ವಿಶ್ವಕಪ್‌ನಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿದೆ.
ಕೊನೆಯ ಓವರ್‌ನಲ್ಲಿ ಗೆಲುವಿನ ರನ್ ಗಳಿಸಿದ ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ ಔಟಾಗದೆ 42 ರನ್(36 ಎಸೆತ)ಹಾಗೂ ಅಲೆಕ್ಸ್ ಹೇಲ್ಸ್ 47 ರನ್(30 ಎಸೆತ)ಗಳಿಸಿದರು. ತಲಾ 2 ವಿಕೆಟ್‌ಗಳನ್ನು ಪಡೆದ ವನಿಂದು ಹಸರಂಗ(2-23), ಧನಂಜಯ ಡಿಸಿಲ್ವಾ(2-24) ಹಾಗೂ ಲಹಿರು ಕುಮಾರ(2-24) ಇಂಗ್ಲೆಂಡ್‌ಗೆ ಸೋಲಿನ ಭೀತಿ ಹುಟ್ಟಿಸಿದ್ದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾದ ಪರ ಆರಂಭಿಕ ಬ್ಯಾಟರ್ ಪಥುಮ್ ನಿಶಾಂಕ ಅರ್ಧಶತಕ(67 ರನ್, 45 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಭಾನುಕ ರಾಜಪಕ್ಸ 22 ಹಾಗೂ ಕುಶಾಲ್ ಮೆಂಡಿಸ್ 18 ರನ್ ಗಳಿಸಿದರು. ಉಳಿದವರು ಒಂದಂಕಿ ಗಳಿಸಲಷ್ಟೇ ಶಕ್ತರಾದರು.
ಇಂಗ್ಲೆಂಡ್‌ನ ಪರ ಮಾರ್ಕ್ ವುಡ್(3-26)ಯಶಸ್ವಿ ಬೌಲರ್ ಎನಿಸಿಕೊಂಡರು. 4 ಓವರ್‌ಗಳಲ್ಲಿ ಕೇವಲ 16 ರನ್ ನೀಡಿ 1 ವಿಕೆಟ್ ಪಡೆದಿದ್ದ ಸ್ಪಿನ್ನರ್ ಆದಿಲ್ ರಶೀದ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.