ಮಂಗಳೂರು: ಸಾರಥಿ ನಂಬರ್-1 ಪ್ರಶಸ್ತಿ ವಿಜೇತ, ಹಿರಿಯ ರಿಕ್ಷಾ ಚಾಲಕ ಮೋಂತು ಲೋಬೊ ನಿಧನ

ಮಂಗಳೂರು, ನ.5: ನಗರದ ಜೆಪ್ಪು ನಿವಾಸಿ, ಹಿರಿಯ ರಿಕ್ಷಾ ಚಾಲಕ, ಸಾರಥಿ ನಂಬರ್ 1 ಪ್ರಶಸ್ತಿ ವಿಜೇತ ಮೋಂತು ಲೋಬೊ (86) ಶನಿವಾರ ಮಧ್ಯಾಹ್ನ ತನ್ನ ಮನೆಯಲ್ಲಿ ನಿಧನರಾಗಿದ್ದಾರೆ.
ಪತ್ನಿ, ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅವರು ಅಗಲಿದ್ದಾರೆ.
ಕಳೆದ 66 ವರ್ಷಗಳಿಂದ ರಿಕ್ಷಾ ಚಾಲಕ ವೃತ್ತಿಯಲ್ಲಿದ್ದ ಮೋಂತು ಲೋಬೊ ಅಪಘಾತ ರಹಿತ ಚಾಲಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸಾರಿಗೆ ಇಲಾಖೆ ಹಾಗೂ ಖಾಸಗಿ ಸಂಸ್ಥೆಗಳಿಂದ ಅನೇಕ ಪ್ರಶಸ್ತಿ ಪಡೆದಿದ್ದರು. ಹಲವು ಸಂಸ್ಥೆಗಳಿಂದ ಸನ್ಮಾನಿತರಾಗಿದ್ದರು. ರಾಜ್ಯಮಟ್ಟದ ಸಾರಥಿ ನಂಬರ್-1 ಪ್ರಶಸ್ತಿಯನ್ನೂ ಗಳಿಸಿದ್ದರು.
ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಮೋಂತು ಲೋಬೊ ಮಂಗಳೂರು ಮಹಾನಗರ ಪಾಲಿಕೆ ಹಾಗೂ ರಾಜ್ಯ ವಿಧಾನಸಭೆಗೂ ಸ್ವತಂತ್ರವಾಗಿ ಸ್ಪರ್ಧಿಸಿದ್ದರು. ಸಮಾಜ ಸೇವೆಯಲ್ಲೂ ಸಕ್ರಿಯರಾಗಿದ್ದರು.
ನಗರದ ರಿಕ್ಷಾ ಚಾಲಕ-ಮಾಲಕರ ವಲಯದಲ್ಲಿ ಸಂಘಟನೆಗಳಲ್ಲಿ ‘ಮೋಂತು ಮಾಮ್’ ಎಂದೇ ಗುರುತಿಸಲ್ಪಟ್ಟಿದ್ದ ಮೋಂತು ಲೋಬೊ ರಿಕ್ಷಾ ಚಾಲನೆ ವೃತ್ತಿಯ ಬಗ್ಗೆ ಅಪಾರ ಗೌರವ ಹೊಂದಿದ್ದರು.
ಸಂತಾಪ: ಮಾಜಿ ಶಾಸಕ ಐವನ್ ಡಿಸೋಜ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ರಿಕ್ಷಾ ಚಾಲಕ ಸಂಘಟನೆಯ ಕಾರ್ಯದರ್ಶಿ ಶೇಖರ್ ಶೆಟ್ಟಿ ದೇರಳಕಟ್ಟೆ, ವಸಂತ್ ಶೆಟ್ಟಿ, ನಾಗೇಂದ್ರ ಕುಮಾರ್, ಜೆಸಿಂತಾ ವಿಜಯ ಅಲ್ಫ್ರೆಡ್ ಮತ್ತಿತರರು ಸಂತಾಪವನ್ನು ಸೂಚಿಸಿದ್ದಾರೆ.
ಮೃತರ ಅಂತ್ಯಕ್ರಿಯೆಯು ರವಿವಾರ ಅಪರಾಹ್ನ 3ಕ್ಕೆ ವೆಲೆನ್ಸಿಯಾ ಚರ್ಚ್‌ನಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.