ಉಡುಪಿಯಲ್ಲಿ ಗಮನ ಸೆಳೆಯುತ್ತಿರುವ ಸಸ್ಯಸಂತೆ

ಉಡುಪಿ : ಉಡುಪಿ ದೊಡ್ಡಣಗುಡ್ಡೆಯ ತೋಟಗಾರಿಕಾ ಇಲಾಖೆ ಆವರಣದಲ್ಲಿ ನ.7ರವರೆಗೆ ಹಮ್ಮಿಕೊಳ್ಳಲಾಗಿ ರುವ ಸಸ್ಯಸಂತೆಯಲ್ಲಿ ವಿವಿಧ ಜಾತಿಯ ಅಲಂಕಾರಿಕಾ ಸಸ್ಯಸ ಹಣ್ಣಿನ ಗಿಡಗಳು ಗಮನ ಸೆಳೆಯುತ್ತಿವೆ.
ಇಲ್ಲಿ ನಾಲ್ಕು ನರ್ಸರಿ, ಎರಡು ತರಕಾರಿ ಬೀಜ ಮಾರಾಟ, ಎರಡು ಸಾವಯವ ಕೃಷಿ, ಎರಡು ಕೃಷಿ ಯಂತ್ರೋಪಕರಣಗಳು ಸೇರಿದಂತೆ ಒಟ್ಟು ೧೦ ಮಳಿಗಳಿವೆ. ಇದರಲ್ಲಿ ೪೦ಕ್ಕೂ ಅಧಿಕ ವಿವಿಧ ಜಾತಿಯ ಅಲಂಕಾರಿಕಾ ಸಸ್ಯಗಳು, ೧೫ಕ್ಕೂ ಅಧಿಕ ಜಾತಿಯ ಹಣ್ಣಿನ ಸಸ್ಯಗಳು, ತೆಂಗು, ಕಾಳು ಮೆಣಸಿನ ಸಸಿಗಳು, ೫೦ಕ್ಕೂ ಹೆಚ್ಚು ತರಕಾರಿ ಮತ್ತು ಹಣ್ಣಿನ ಬೀಜಗಳ ಮಾರಾಟ ಆಕರ್ಷಣೀಯ ವಾಗಿವೆ.
ತೋಟಗಾರಿಕಾ ಇಲಾಖೆಯಿಂದ ಆರು ಜಾತಿಯ ೫೦೦ ಮಾವು, ೧೦೦ ತೆಂಗು, ೨೦೦ ಅಡಿಕೆ ಗಿಡಗಳನ್ನು ಇಲಾಖಾ ದರದಲ್ಲಿ ಇಲ್ಲಿ ಮಾರಾಟ ಮಾಡಲಾಗುತ್ತಿವೆ. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿರುವ ಖಾಸಗಿ ನರ್ಸರಿ ಮತ್ತು ಸರಕಾರಿ ನರ್ಸರಿಯಲ್ಲಿ ಬೆಳೆಸಿದ ಸಸ್ಯಗಳು, ಕಸಿ ಗಿಡಗಳು, ನರ್ಸರಿ ಉಪಕರಣಗಳ ಮಾರಾಟ ನಡೆಯುತ್ತಿದೆ.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಮಾತನಾಡಿ, ನಗರ ಪ್ರದೇಶದಲ್ಲಿ ಮನೆಯ ಆವರಣದಲ್ಲಿ ಜಾಗದ ಕೊರತೆ ಇದ್ದರೂ ಸಹ ಮನೆಗಳ ಮೇಲ್ಛಾವಣಿಯಲ್ಲಿ ಹೂ ಮತ್ತು ಹಣ್ಣಿನ ಸಸ್ಯಗಳನ್ನು ಬೆಳೆಸಲು ಸಾಧ್ಯವಿದೆ. ಈ ಸಸ್ಯಸಂತೆಯ ಮೂಲಕ ಉತ್ತಮ ಸಸಿಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದರು.
ನಗರಸಭಾ ಸದಸ್ಯರಾದ ಗಿರಿಧರ್ ಆಚಾರ್ಯ, ಗಿರೀಶ್ ಅಂಚನ್, ಪ್ರಭಾಕರ ಪೂಜಾರಿ, ಉಡುಪಿ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಭುವನೇಶ್ವರಿ, ಸಹಾಯಕ ನಿರ್ದೇಶಕ ಗುರುಪ್ರಸಾದ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು. ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.







