ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವೆಲ್ಫೇರ್ ಪಾರ್ಟಿ ಉಡುಪಿ ಡಿಸಿಗೆ ಮನವಿ

ಉಡುಪಿ : ದೇಶದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಬಿಕ್ಕಟ್ಟು ಪರಿಹಾರಕ್ಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ನಿಯೋಗ ಶನಿವಾರ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ತೆ ನೀಡಬೇಕು. ಸಂವಿಧಾನದ ಪರಿಚ್ಚೇದ ೨೧ರ ಅಡಿಯಲ್ಲಿ ಜೀವ ನೋಪಾಯದ ಹಕ್ಕನ್ನು ಮೂಲಭೂತ ಹಕ್ಕನಾಗಿ ಮಾಡಬೇಕು. ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಯನ್ನು ಹಿಂಪಡೆಯಬೇಕು. ಬಡವರಿಗೆ ಅವರ ಖರೀದಿ ಸಾಮರ್ಥ್ಯವನ್ನು ಸಕ್ರೀಯಗೊಳಿ ಸಲು ಹಣ ನೀಡಬೇಕು. ಎಲ್ಲಾ ಬಿಪಿಎಲ್ ಕಾರ್ಡ್ ಕುಟುಂಬಗಳಿಗೆ ಉಚಿತ ಸಿಲಿಂಡರ್ ಮತ್ತು ಸಬ್ಸಿಡಿ ರಿಫಿಲ್ ಸಿಲಿಂಡರ್‌ಗಳನ್ನು ನೀಡಬೇಕು.
ಅಪೌಷ್ಟಿಕತೆ ಮತ್ತು ಹಸಿವು ತಡೆಯಲು ಬಿಪಿಎಲ್ ಕಾರ್ಡ್‌ದಾರರಿಗೆ ಅನ್ನ ರೋಜ್‌ಗಾರ್ ಯೋಜನೆ ಮುಂದುವರಿಸಬೇಕು. ಮನ್‌ರೇಗಾ ಯೋಜನೆ ಯನ್ನು ನಗರದ ಬಡವರಿಗೂ ವಿಸ್ತರಿಸಬೇಕು ಮತ್ತು ವೇತನವನ್ನು 500ರೂ. ಏರಿಸಬೇಕು. ಕೆಲಸದ ದಿನಗಳನ್ನು ೨೦೦ ದಿನಗಳಿಗೆ ಹೆಚ್ಚಿಸಬೇಕು. ಆಹಾರ ಭದ್ರತಾ ಕಾಯ್ದೆ ಮತ್ತು ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆ ಸರಿಯಾದ ರೀತಿಯಲ್ಲಿ ಅನಿಷ್ಟಾನಗೊಳಿಸಬೇಕು.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ಶುಲ್ಕವನ್ನು ಹಿಂಪಡೆಯ ಬೇಕು ಅದನ್ನು ಜಿಎಸ್‌ಟಿ ವ್ಯಾಪ್ತಿಯಲ್ಲಿ ತರಬೇಕು. ಕಾಳಸಂತೆ ಮತ್ತು ಭ್ರಷ್ಟಾಚಾರವನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಅಸಂಘಟಿತ ವಲಯಗಳನ್ನು ಸಂಘಟಿಸಬೇಕು ಮತ್ತು ಭದ್ರತೆಗಳು ನೀಡಬೇಕು. ಮಹಿಳಾ ಕಾರ್ಮಿಕರಿಗೆ ಸಮಾನ ವೇತನ ಮತ್ತು ಭದ್ರತೆ ನೀಡಬೇಕು. ಸೂಕ್ಷ್ಮ, ಸಣ್ಣ ಮತ್ತು ಮದ್ಯಮ ಉದ್ಯಮಗಳಿಗೆ ಪ್ರೋ ಸೂಕ್ತ. ನೆರವು ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ವೆಲ್ಫೇರ್ ಪಾರ್ಟಿ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಉದ್ಯಾವರ, ಉಪಾಧ್ಯಕ್ಷ ಶಹಜಹಾನ್ ತೋನ್ಸೆ, ಸದಸ್ಯರಾದ ರಝಾಕ್, ಅನ್ವರ್ ಅಲಿ, ರಿಯಾಝ್ ಅಹ್ಮದ್ ಕುಕ್ಕಿಕಟ್ಟೆ ಉಪಸ್ಥಿತರಿದ್ದರು.







