ಮಂಗಳೂರು: ಮರಳು ಅಕ್ರಮ ಸಾಗಾಟ ಆರೋಪ; ಲಾರಿ ಚಾಲಕ, ಮಾಲಕ ಸೆರೆ

ಮಂಗಳೂರು, ನ.5: ನಗರದ ಪಡೀಲ್-ಬಜಾಲ್ ಕ್ರಾಸ್ ಬಳಿ ಶನಿವಾರ ಮುಂಜಾನೆ ಕರ್ತವ್ಯ ನಿರತ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ಆರೋಪದಲ್ಲಿ ಮರಳು ಅಕ್ರಮ ಸಾಗಾಟದ ಟಿಪ್ಪರ್ ಲಾರಿಯನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಗಳನ್ನು ಲಾರಿಯ ಮಾಲಕ ಅಳಪೆ ಸರಿಪಳ್ಳದ ರೋಶನ್ ಲೋಬೊ (38) ಮತ್ತು ಲಾರಿ ಚಾಲಕ ಬಜಾಲ್ ಜೆಲ್ಲಿಗುಡ್ಡೆಯ ಶಾಕಿರ್ (36) ಎಂದು ಗುರುತಿಸಲಾಗಿದೆ.
ಲಾರಿಯಲ್ಲಿದ್ದ 5 ಸಾವಿರ ರೂ. ಮೌಲ್ಯದ ಸುಮಾರು ಒಂದುವರೆ ಯುನಿಟ್ ಮರಳನ್ನು ವಶಪಡಿಸಲಾಗಿದೆ. ಟಿಪ್ಪರ್ ಲಾರಿಯ ಮೌಲ್ಯ 4 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಕಂಕನಾಡಿ ನಗರ ಪೊಲೀಸ್ ಠಾಣೆಯ ಎಸ್ಸೈ ರಘು ನಾಯಕ್ ಶನಿವಾರ ಮುಂಜಾನೆ ಪಡೀಲ್-ಬಜಾಲ್ ಕ್ರಾಸ್ ಬಳಿ ಗಸ್ತು ನಿರತರಾಗಿದ್ದ ವೇಳೆ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ವಾಹನವು ಬಿಕರ್ನಕಟ್ಟೆ ಕಡೆಯಿಂದ ಪಡೀಲ್ ಕಡೆಗೆ ಬರುತ್ತಿರುವ ಬಗ್ಗೆ ಮಾಹಿತಿ ಪಡೆದು ತಡೆದು ನಿಲ್ಲಿಸಲು ಸೂಚಿಸಿದರೂ ಟಿಪ್ಪರ್ ಲಾರಿಯ ಚಾಲಕನು ವಾಹನವನ್ನು ಸ್ವಲ್ಪಮುಂದೆ ನಿಲ್ಲಿಸಿ ಚಾಲಕ ಮತ್ತು ಮಾಲಕ ಓಡಿ ಹೋಗಲು ಪ್ರಯತ್ನಿಸಿದ್ದರು. ತಕ್ಷಣ ಸಿಬ್ಬಂದಿ ಸಹಕಾರದಲ್ಲಿ ಅವರನ್ನು ಹಿಡಿದು ವಿಚಾರಿಸಿದಾಗ ಉಳಾಯಿಬೆಟ್ಟು ಗ್ರಾಮದ ಉದ್ದಬೆಟ್ಟು ಎಂಬಲ್ಲಿನ ಫಲ್ಗುಣಿ ನದಿ ತೀರದಿಂದ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ನೀಡಿದರು ಎನ್ನಲಾಗಿದೆ. ಅದರಂತೆ ಪೊಲೀಸರು ಇಬ್ಬರನ್ನು ಬಂಧಿಸಿ, ಮರಳು ಸಮೇತ ಲಾರಿಯನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರಗಿಸಿದ್ದಾರೆ.







