ಸುರತ್ಕಲ್: ಗುಡುಗು ಸಹಿತ ಭಾರೀ ಮಳೆ, ರಸ್ತೆಗೆ ಉರುಳಿ ಬಿದ್ದ ಮರ

ಮಂಗಳೂರು : ಸುರತ್ಕಲ್ ಪರಿಸರದಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿದ ಪರಿಣಾಮ ಮೂಡ ಮಾರುಕಟ್ಟೆ ವೇಣು ಗೋಪಾಲ್ ಆಸ್ಪತ್ರೆಯ ರಸ್ತೆಯಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದಿದ್ದು, ವಿದ್ಯುತ್ ತಂತಿಗಳ ಮೇಲೆ ನೇತಾಡುತ್ತಿರುವ ಘಟನೆ ಶನಿವಾರ ನಡೆದಿದೆ.
ರಾತ್ರಿ ಸುರಿದ ಭಾರೀ ಗಾಳಿ, ಮಳೆಗೆ ಮೂಡ ಕೆಫೆ ಬಳಿ ಇದ್ದ ಬೃಹತ್ ಮರವೊಂದು ಉರುಳಿದೆ. ಆದರೆ, ಅದರ ಪಕ್ಕದಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಇದ್ದು, ಮರ ವಿದ್ಯುತ್ ವಯರ್ ಮೇಲೆ ಬಿದ್ದಿದ್ದು, ಯಾವುದೇ ಕ್ಷಣದಲ್ಲಿ ರಸ್ತೆಗೆ ಉರುಳುವ ಸಾಧ್ಯತೆ ಇದೆ.
ಘಟನೆಯಿಂದ ಟ್ರಾನ್ಸ್ ಫಾರ್ಮರ್ ಕಂಬಗಳು ತುಂಡಾಗಿದ್ದು, ಮರ ವಿದ್ಯುತ್ ವಯರ್ ಗಳ ಮೇಲೆ ನೇತಾಡುತ್ತಿದೆ. ಮೆಸ್ಕಾಂ ಮತ್ತು ಪೊಲೀಸ್ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಲ್ಲದೆ ರಸ್ತೆಯ ಎರಡೂ ಬದಿಗಳಲ್ಲಿ ಕಲ್ಲುಗಳನ್ನಿಟ್ಟು ರಸ್ತೆ ತಡೆದು ನಡೆಯಬಹುದಾಗಿರುವ ಅನಾಹುತವನ್ನು ತಪ್ಪಿಸಿದ್ದಾರೆ.
ಮರದ ಬುಡದಲ್ಲಿ ಮೂಡಾ ಮಾರುಕಟ್ಟೆ ಇದ್ದು, ಅಲ್ಲಿರುವ ಹೊಟೇಲ್, ಗೂಡಂಗಡಿಗಳಲ್ಲಿದ್ದ ಜನರನ್ನು ಹಾಗೂ ಅಂಗಡಿದಾರರನ್ನು ತೆರವುಗೊಳಿಸಲಾಗಿದೆ.