ಅಕ್ರಮ ಹಣ ವರ್ಗಾವಣೆ ಪ್ರಕರಣ: ಈ.ಡಿ.ಯಿಂದ ಮುಖ್ತಾರ್ ಅನ್ಸಾರಿ ಪುತ್ರ ಅಬ್ಬಾಸ್ ಅನ್ಸಾರಿ ಬಂಧನ

ಹೊಸದಿಲ್ಲಿ,ನ.5: ಜಾರಿ ನಿರ್ದೇಶನಾಲಯ (ಈ.ಡಿ.)ವು ಗ್ಯಾಂಗ್‌ಸ್ಟರ್ ಪರಿವರ್ತಿತ ರಾಜಕಾರಣಿ ಮುಖ್ತಾರ್ ಅನ್ಸಾರಿ(Mukhtar Ansari) ಪುತ್ರ ಹಾಗೂ ಮಾವು ಕೇತ್ರದ ಸುಹೇಲ್ ದೇವ್ (Suhail Dev)ಭಾರತೀಯ ಸಮಾಜ ಪಾರ್ಟಿಯ ಶಾಸಕ ಅಬ್ಬಾಸ್ ಅನ್ಸಾರಿ(Abbas Ansari)ಯವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿದೆ.
ಉತ್ತರ ಪ್ರದೇಶದ ಪ್ರಯಾಗರಾಜ್(Prayagraj) ನಲ್ಲಿರುವ ತನಿಖಾ ಸಂಸ್ಥೆಯ ಕಚೇರಿಯಲ್ಲಿ ಸುದೀರ್ಘ ವಿಚಾರಣೆಯ ಬಳಿಕ ಅನ್ಸಾರಿ (30)ಯವರನ್ನು ಬಂಧಿಸಲಾಯಿತು ಎಂದು ಈ.ಡಿ.ಅಧಿಕಾರಿಗಳು ಶನಿವಾರ ತಿಳಿಸಿದರು. ಅನ್ಸಾರಿಯ ತಂದೆ ಮತ್ತು ಕುಟುಂಬದ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ ಎಂದರು.
ಕಳೆದ ತಿಂಗಳು ಈ.ಡಿ.ಮುಖ್ತಾರ್ ಅನ್ಸಾರಿಗೆ ಸೇರಿದ 1.48 ಕೋ.ರೂ.(ನೋಂದಣಿ ಮೌಲ್ಯ)ಗಳ ಏಳು ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿಕೊಂಡಿತ್ತು. ಐದು ಸಲ ಶಾಸಕರಾಗಿರುವ ಮುಖ್ತಾರ್ ಅನ್ಸಾರಿ (59) ಪ್ರಸ್ತುತ ಉತ್ತರ ಪ್ರದೇಶದ ಬಂಡಾ ಜೈಲಿನಲ್ಲಿದ್ದಾರೆ. ಈ.ಡಿ.ಕಳೆದ ವರ್ಷ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರನ್ನು ವಿಚಾರಣೆಗೊಳಪಡಿಸಿತ್ತು.
ಈ.ಡಿ.ಆಗಸ್ಟ್ ನಲ್ಲಿ ಮುಖ್ತಾರ್ ಅನ್ಸಾರಿಯವರ ಹಿರಿಯ ಸೋದರ ಹಾಗೂ ಬಿಎಸ್ಪಿ ಸಂಸದ ಅಫ್ಝಲ್ ಅನ್ಸಾರಿಯವರ ದಿಲ್ಲಿಯಲ್ಲಿನ ಅಧಿಕೃತ ನಿವಾಸ ಹಾಗೂ ಘಾಜಿಪುರ, ಮುಹಮ್ಮದಾಬಾದ್, ಮಾವು ಮತ್ತು ಲಕ್ನೋಗಳಲ್ಲಿಯ ಕೆಲವು ಸ್ಥಳಗಳ ಮೇಲೆ ದಾಳಿಗಳನ್ನು ನಡೆಸಿತ್ತು.
ಮುಖ್ತಾರ್ ಅನ್ಸಾರಿ ವಿರುದ್ಧ ಉ.ಪ್ರದೇಶದಲ್ಲಿ ದಾಖಲಾಗಿರುವ ಹಲವಾರು ಎಫ್ಐಆರ್ಗಳು ಮತ್ತು ಅವರ ಪತ್ನಿ ಹಾಗೂ ಸಂಬಂಧಿಗಳು ಪಾಲುದಾರಿಕೆಯಲ್ಲಿ ನಡೆಸುತ್ತಿರುವ ವಿಕಾಸ ಕನ್ಸ್ಟ್ರಕ್ಷನ್ಸ್ ವಿರುದ್ಧ ದಾಖಲಾಗಿರುವ ಎರಡು ಎಫ್ಐಆರ್ಗಳನ್ನು ಈ.ಡಿ.ಪ್ರಕರಣವು ಆಧರಿಸಿದೆ.
ಭೂ ಕಬಳಿಕೆ,ಕೊಲೆ ಮತ್ತು ಹಫ್ತಾ ವಸೂಲಿ ಸೇರಿದಂತೆ ಕನಿಷ್ಠ 49 ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ.ಡಿ.ಮುಖ್ತಾರ್ ಅನ್ಸಾರಿ ಮೇಲೆ ನಿಗಾಯಿರಿಸಿದೆ. ಕೊಲೆ ಮತ್ತು ಕೊಲೆಯತ್ನ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಅವರು ಉ.ಪ್ರದೇಶದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ಆಗಸ್ಟ್ನಲ್ಲಿ ಗಾಝಿಪುರ (Ghazipur)ಜಿಲ್ಲಾಡಳಿತವು ಮುಖ್ತಾರ್ ಅನ್ಸಾರಿ ಅಕ್ರಮ ಸಂಪಾದನೆಯಿಂದ ಖರೀದಿಸಿದ್ದೆನ್ನಲಾದ ಆರು ಕೋ.ರೂ.ಗೂ ಅಧಿಕ ಮೌಲ್ಯದ ಎರಡು ನಿವೇಶನಗಳನ್ನು ವಶಪಡಿಸಿಕೊಂಡಿತ್ತು. ಜುಲೈನಲ್ಲಿ ಉ.ಪ್ರದೇಶ ಪೊಲೀಸರು ಗ್ಯಾಂಗ್ಸ್ಟರ್ ಕಾಯ್ದೆಯಡಿ ಅಫ್ಝಲ್ ಅನ್ಸಾರಿಗೆ ಸೇರಿದ 14.90 ಕೋ.ರೂ.ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದ್ದರು.







