ತಂಬಾಕು ಮುಕ್ತ ಅಪಾರ್ಟ್‌ಮೆಂಟ್: ಸಿಆರ್‌ಇಡಿಎಐ ಸದಸ್ಯರೊಂದಿಗೆ ಸಭೆ

ಉಡುಪಿ: ಜಿಲ್ಲೆಯಲ್ಲಿ ತಂಬಾಕು ಮುಕ್ತ ಅಪಾರ್ಟ್‌ಮೆಂಟ್ ಯೋಜನೆಯ ಅನುಷ್ಠಾನದ ಮುಂದುವರಿದ ಭಾಗ ವಾಗಿ ಜಿಲ್ಲೆಯ ರಿಯಲ್ ಎಸ್ಟೇಟ್ ಡೆವಲಪ್‌ಮೆಂಟ್ ಅಸೋಸಿಯೇಷನ್ ಒಕ್ಕೂಟ (ಸಿಆರ್‌ಇಡಿಎಐ) ಸದಸ್ಯರುಗಳಿಗೆ ಶುಕ್ರವಾರ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯಿತು.
ರಾಜ್ಯ ತಂಬಾಕು ನಿಯಂತ್ರಣ ಕೋಶದ ಯೋಜನಾ ವ್ಯವಸ್ಥಾಪಕ ಪ್ರಭಾಕರ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಎಲ್ಲಾ ವಸತಿ ಸಮುಚ್ಛಯದಲ್ಲಿರುವವರ ಪೈಲಟ್ ಸಮೀಕ್ಷೆ ನಡೆಸಿ, ಜನಾಭಿಪ್ರಾಯ ಪಡೆಯಲು ಆರೋಗ್ಯ ಇಲಾಖೆಯು ಕಾರ್ಯಪ್ರವೃತ್ತವಾಗಲಿದೆ ಎಂದರು.
ನೂತನವಾಗಿ ನಿರ್ಮಿಸಲಾಗುವ ಅಪಾರ್ಟ್‌ಮೆಂಟ್‌ಗಳನ್ನು ತಂಬಾಕು ಮುಕ್ತ ವಲಯಗಳನ್ನಾಗಿ ನಿರ್ಮಿಸಲು ಕ್ರಮಕೈಗೊಳ್ಳುವುದಾಗಿ ಸಭೆಯಲ್ಲಿ ಹಾಜರಿದ್ದ ಬಿಲ್ಡರ್ಸ್‌ಗಳು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಮಾತನಾಡಿ, ವಸತಿ ಸಮುಚ್ಛಯಗಳನ್ನು ತಂಬಾಕು ಮುಕ್ತ ಗೊಳಿಸುವುದು ಆರೋಗ್ಯದ ಹಿತದೃಷ್ಟಿಯಿಂದ ಅನಿವಾರ್ಯವಾಗಿದ್ದು, ಈ ಯೋಜನೆಗೆ ಬಿಲ್ಡರ್ಸ್‌ಗಳ ಸಹಕಾರ ಅತೀಅಗತ್ಯ ಎಂದರು.
ಸಭೆಯಲ್ಲಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ನಾಗರತ್ನ, ಕೋಟ್ಪಾ ತನಿಖಾ ತಂಡದ ಮುಖ್ಯಸ್ಥರಾದ ಉಡುಪಿ ಮತ್ತು ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಗಳು, ಜಿಲ್ಲಾ ಸಲಹೆಗಾರ್ತಿ ಮಂಜುಳಾ ಶೆಟ್ಟಿ, ಸಮಾಜ ಕಾರ್ಯಕರ್ತೆ ಶೈಲಾ ಶಾಮನೂರು ಮತ್ತಿತರರು ಉಪಸ್ಥಿತರಿದ್ದರು.







