ಭಾರತದ ಮೊದಲ ಮತದಾರ ಶ್ಯಾಮ್ ಶರಣ್ ನೇಗಿ ನಿಧನ

ಕಿನ್ನೌರ್(ಹಿಮಾಚಲಪ್ರದೇಶ), ನ. 5: ಸ್ವತಂತ್ರ್ಯ ಭಾರತದ ಮೊದಲ ಮತದಾರ ಶ್ಯಾಮ್ ಶರಣ್(Shyam Sharan) ನೇಗಿ (106)ಅವರು ಶನಿವಾರ ಬೆಳಗ್ಗೆ ಹಿಮಾಚಲ ಪ್ರದೇಶದ ಕಲ್ಪಾದಲ್ಲಿರುವ ತನ್ನ ನಿವಾಸದಲ್ಲಿ ನಿಧನರಾದರು.
ನೇಗಿ ಅವರು ಸ್ವತಂತ್ರ್ಯ ಭಾರತದಲ್ಲಿ 1951 ಅಕ್ಟೋಬರ್ 25ರಂದು ಕಲ್ಪಾ ಮತಗಟ್ಟೆಯಲ್ಲಿ ಮೊದಲ ಮತ ಚಲಾಯಿಸಿದ್ದರು. ಆ ಮೂಲಕ ಅವರು ದೇಶದ ಮೊದಲ ಮತದಾರ ಎನಿಸಿದರು. ಈ ವರ್ಷ ನವೆಂಬರ್ 2ರಂದು ನಡೆದ ಹಿಮಾಚಲ ಪ್ರದೇಶ 14ನೇ ವಿಧಾನ ಸಭೆ ಚುನಾವಣೆಯಲ್ಲಿ ಅಂಚೆ ಮತಪತ್ರದ ಮೂಲಕ ಅವರು ತನ್ನ ಕೊನೆಯ ಮತ ಚಲಾಯಿಸಿದರು.
ನೇಗಿ ಅವರು ಹಿಮಾಚಲಪ್ರದೇಶದ ಕಿನ್ನೌರ್ ಬುಡಕಟ್ಟು ಜಿಲ್ಲೆಯಲ್ಲಿ 1917 ಜುಲೈಯಲ್ಲಿ ಜನಿಸಿದ್ದರು.
‘‘ನೇಗಿ ಅವರ ನಡೆ ಶ್ಲಾಘನೀಯ. ಇದು ಯುವ ಜನರು ಚುನಾವಣೆಯಲ್ಲಿ ಭಾಗವಹಿಸಲು ಹಾಗೂ ಪ್ರಜಾಪ್ರಭುತ್ವವನ್ನು ಬಲಪಡಿಸಲು ಪ್ರೇರಣೆಯಾಗಬೇಕು’’ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi)ಅವರು ಟ್ವೀಟ್ ಮಾಡಿದ್ದಾರೆ.
ನೇಗಿ ಅವರ ನಿಧನಕ್ಕೆ ಮುಖ್ಯಮಂತ್ರಿ ಜೈರಾಮ್ ಠಾಕೂರ್(Jairam Thakur) ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ದೇಶದ ಮೊದಲ ಮತದಾರ ತನ್ನ ಕೊನೆಯ ಮತ ಚಲಾಯಿಸಿದ ನೆನಪು ಸದಾ ಭಾವನಾತ್ಮಕವಾಗಿರುತ್ತದೆ ಎಂದಿದ್ದಾರೆ.
ನೇಗಿ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಮುಖ್ಯ ಚುನಾವಣಾ ಆಯೋಗ, ಅವರು ಕೇವಲ ಸ್ವತಂತ್ರ್ಯ ಭಾರತದ ಮೊದಲ ಮತದಾರ ಮಾತ್ರವಲ್ಲ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿಕೊಂಡಿರುವ ಅಸಾಧಾರಣ ವ್ಯಕ್ತಿ. ರಾಷ್ಟ್ರಕ್ಕೆ ಅವರ ಸೇವೆ ಪ್ರಶಂಸನೀಯ ಎಂದು ಸ್ಮರಿಸಿದೆ.
ಮಾಸ್ಟರ್ ಶ್ಯಾಮ್ ಎಂದೇ ಜನಪ್ರಿಯರಾಗಿದ್ದ ಶ್ಯಾಮ್ ಶರಣ್ ನೇಗಿ ಅವರು ದೇಶದಲ್ಲಿ 1952 ಜನವರಿ ಹಾಗೂ ಫೆಬ್ರವರಿಯಲ್ಲಿ ನಡೆಸಲಾದ ಸಾರ್ವತ್ರಿಕ ಚುನಾವಣೆಯ ಮೊದಲ ಮತದಾರ. ಹಿಮಪಾತ ಹಾಗೂ ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಈ ಚುನಾವಣೆಯನ್ನು 1951 ಫೆಬ್ರವರಿಯಲ್ಲಿ ನಡೆಸಲಾಗಿತ್ತು. 1951ರಿಂದ ನೇಗಿ ಅವರು ಪ್ರತಿ ಲೋಕಸಭಾ, ವಿಧಾನ ಸಭಾ ಹಾಗೂ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತದಾನಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದರು.







