ಶ್ರೀಕೃಷ್ಣ ಮಠದಲ್ಲಿ ತೆಪ್ಪೋತ್ಸವ ಸಹಿತ ಲಕ್ಷದೀಪೋತ್ಸವ ಪ್ರಾರಂಭ

ಉಡುಪಿ, ನ.5: ಉಡುಪಿ ಶ್ರೀಕೃಷ್ಣ ಮಠದಲ್ಲಿ ಉತ್ಧಾನ ದ್ವಾದಶಿಯ ದಿನವಾದ ಇಂದು ಮೊದಲ ದಿನದ ಲಕ್ಷದೀಪೋತ್ಸವ ವೈಭವದಿಂದ ನಡೆಯಿತು. ದೇವರಮೂರ್ತಿಯನ್ನು ಗರ್ಭಗುಡಿಯಿಂದ ಹೊರತಂದು ಮೊದಲು ತೆಪ್ಪೋತ್ಸವ ಹಾಗೂ ನಂತರ ಲಕ್ಷದೀಪೋತ್ಸವ ನಡೆಯಿತು.
ಲಕ್ಷದೀಪೋತ್ಸವ ಒಟ್ಟು ನಾಲ್ಕು ದಿನಗಳ ಕಾಲ ನಡೆಯಲಿದೆ. ಈ ಸಂದರ್ಭದಲ್ಲಿ 30 ಸಾವಿರಕ್ಕೂ ಅಧಿಕ ಮಣ್ಣಿನ ಹಣತೆಯಲ್ಲಿ ದೀಪಗಳನ್ನು ಕೃಷ್ಣ ಮಠದೊಳಗೆ, ರಥಬೀದಿ ಹಾಗೂ ಮಧ್ವಸರೋವರದ ಸುತ್ತಲೂ ಬೆಳಗಿಸ ಲಾಯಿತು. ರಥಬೀದಿಯ ಸುತ್ತಲೂ 400 ಕ್ಕೂ ಅಧಿಕ ಗೂಡುದೀಪಗಳನ್ನು ಸಹ ಬೆಳಗಿಸಲಾಗಿದೆ.
ಶ್ರೀಕೃಷ್ಣ ಮಠದ ಮಧ್ವಸರೋವರದ ಮಧ್ಯದಲ್ಲಿರುವ ಮಂಟಪದಲ್ಲಿ ಎಲ್ಲಾ ಮಠಾಧೀಶರು ಮೂರ್ತಿಗೆ ಪೂಜೆ ಮಾಡಿ ಕ್ಷೀರಾಬ್ದಿ ಅರ್ಘ್ಯ ನೀಡಿದರು. ಮೂರ್ತಿಗಳಿಗೆ ಮಧ್ವಸರೋವರದಲ್ಲಿ ತೆಪ್ಪೋತ್ಸವ ನಡೆಸಿದ ಬಳಿಕ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರನ ಉತ್ಸವ ಮೂರ್ತಿ ಗಳನ್ನು ಎರಡು ರಥದಲ್ಲಿರಿಸಿ ರಥೋತ್ಸವ ನಡೆಯಿತು.
ಲಕ್ಷದೀಪೋತ್ಸವದ ಇಂದಿನ ಕಾರ್ಯಕ್ರಮಗಳಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥರು, ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು, ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥರು, ಅದಮಾರು ಕಿರಿಯ ಮಠಾಧೀಶ ಶ್ರೀಈಶಪ್ರಿಯತೀರ್ಥರು ಹಾಗೂ ಪಲಿಮಾರು ಕಿರಿಯ ಮಠಾಧೀಶ ಶ್ರೀವಿದ್ಯಾರಾಜೇಶ್ವರತೀರ್ಥರು ಭಾಗವಹಿಸಿದರು.
ಕಳೆದ ಭಾಗೀರಥಿ ಜಯಂತಿಯಂದು ಗರ್ಭಗುಡಿ ಸೇರಿದ ಉತ್ಸವ ಮೂತಿ, ಉತ್ಧಾನದ್ವಾದಶಿ ದಿನದಂದು ಮತ್ತೆ ರಥವನ್ನೇರಿದೆ. ಲಕ್ಷದೀಪೋತ್ಸವದೊಂದಿಗೆ ಶ್ರೀಕೃಷ್ಣ ಮಠದಲ್ಲಿ ರಥೋತ್ಸವಗಳು ಪ್ರಾರಂಭಗೊಂಡಿವೆ. ಅಪರಾಹ್ನ ೩:೦೦ ಗಂಟೆಗೆ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರ ನೇತೃತ್ವದಲಿ ಅಷ್ಟ ಮಠಾಧೀಶರು ರಥಬೀದಿಯಲ್ಲಿ ಹಣತೆ ಮುಹೂರ್ತ ನಡೆಸಿದ್ದರು.







