ಮಂಗಳೂರು ಅಳಿವೆ ಬಾಗಿಲಿನ ಹೂಳೆತ್ತುವ ಕಾಮಗಾರಿಗೆ ಚಾಲನೆ

ಮಂಗಳೂರು : ಮಹಾನಗರ ಪಾಲಿಕೆ ವ್ಯಾಪ್ತಿಯ 45ನೇ ಪೋರ್ಟ್ ವಾರ್ಡಿನ ಹಳೆ ಬಂದರಿನಲ್ಲಿ ನಾವೆಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಅಳಿವೆಬಾಗಿನಲ್ಲಿ ಹೂಳೆತ್ತುವ 1 ಕೋ.ರೂ. ವೆಚ್ಚದ ಕಾಮಗಾರಿ ಹಾಗೂ ಹಳೆ ಬಂದರು ವ್ಯಾಪ್ತಿಯಲ್ಲಿ ಬಿಎಂಡಿ ಫೆರಿ ಬೋಟ್ ಚಾನೆಲ್‌ನಲ್ಲಿ ತುಂಬಿರುವ ಹೂಳನ್ನು ತೆಗೆಯುವ 95 ಲಕ್ಷ ರೂ.ವೆಚ್ಚದ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಶನಿವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಹಳೆಬಂದರಿನಿಂದ ಮೀನುಗಾರಿಕೆಗೆ ತೆರಳುವ ಬೋಟ್‌ಗಳ ಸುಗಮ ಸಂಚಾರಕ್ಕೆ ಹೂಳೆತ್ತದ ಕಾರಣ ಸಮಸ್ಯೆಯಾಗಿತ್ತು. ಈ ಬಗ್ಗೆ ಮೀನುಗಾರಿಕಾ ಬೋಟ್‌ಗಳ ಮಾಲಕರು, ಸ್ಥಳೀಯ ಜನಪ್ರತಿನಿಧಿಗಳು ತನ್ನ ಗಮನ ಸೆಳೆದಿದ್ದರು.ಅದರಂತೆ ಬಂದರು ಇಲಾಖೆಯ ಮೂಲಕ ಡ್ರೆಜ್ಜಿಂಗ್ ನಡೆಸಲು ಉದ್ದೇಶಿಸಲಾಗಿದೆ. ಕಸಬಾ ಬೆಂಗ್ರೆ ಫೆರಿಯ ಭಾಗದಲ್ಲಿ ಮರಳು ತುಂಬಿದ ಬಗ್ಗೆ ಸ್ಥಳೀಯರು ನನ್ನ ಗಮನಕ್ಕೆ ತಂದಿದ್ದರು. ಈ ಎರಡೂ ಕಾಮಗಾರಿಗಳನ್ನು ಇದೀಗ ನಡೆಸಲಾಗುತ್ತಿದೆ. ತೋಟ ಬೆಂಗ್ರೆ ಮತ್ತು ಇತರ ಸ್ಥಳಗಳಲ್ಲಿ ಶೀಘ್ರವಾಗಿ ಡ್ರೆಜ್ಜಿಂಗ್ ಕೈಗೆತ್ತಿಕೊಳ್ಳಲಾಗುವುದು ಎಂದರು.
ಸ್ವಾತಂತ್ರ್ಯದ ಬಳಿಕ ರಾಜ್ಯದಲ್ಲಿ ಮೀನುಗಾರಿಕೆ ಮತ್ತು ಬಂದರು ಇಲಾಖೆಗೆ ಸಂಬಂಧಿಸಿ ಇದೇ ಮೊದಲ ಬಾರಿಗೆ ದೊಡ್ಡ ಮೊತ್ತದ ಅನುದಾನ ಮಂಗಳೂರಿಗೆ ಲಭಿಸಿದೆ. ೬.೨೫ ಕೋ.ರೂ.ವೆಚ್ಚದಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಮೂಲಕ ತೇಲುವ ಜೆಟ್ಟಿಗೆ ಶೀಘ್ರ ಶಿಲಾನ್ಯಾಸ ನೆರವೇರಿಸಲಾಗುವುದು. ೩.೩೭ ಕೋ. ರೂ.ವೆಚ್ಚದಲ್ಲಿ ನಾಡದೋಣಿ ತಂಗುದಾಣ ಕಾಮಗಾರಿ ಬೆಂಗರೆಯಲ್ಲಿ ನಡೆಯುತ್ತಿದೆ. ಬೆಂಗರೆಯಲ್ಲಿ ೬೫ ಕೋ. ರೂ.ವೆಚ್ಚದಲ್ಲಿ ವಾಣಿಜ್ಯ ಜೆಟ್ಟಿ ಕಾಮಗಾರಿಯೂ ಆರಂಭಗೊಂಡಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.
ಈ ಸಂದರ್ಭ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ನಿತಿನ್‌ಕುಮಾರ್, ಸ್ಥಳೀಯ ಪ್ರಮುಖರಾದ ಮೀರಾ ಕರ್ಕೇರ, ಜಗದೀಶ್ ಬೋಳೂರು, ಶಶಿಕುಮಾರ್ ಬೆಂಗ್ರೆ, ಮೋಹನ್ ಬೆಂಗ್ರೆ, ಚೇತನ್ ಬೆಂಗ್ರೆ, ವಿನೋದ್ ಮೆಂಡನ್, ಅನಿಲ್ ಹೊಯಿಗೆಬಜಾರ್, ವಸಂತ್ ಜೆ. ಪೂಜಾರಿ, ಸಲೀಂ ಬೆಂಗ್ರೆ ಉಪಸ್ಥಿತರಿದ್ದರು.
*29 ಕೋ. ರೂ.ವೆಚ್ಚದಲ್ಲಿ ಬಂದರು ಬಳಿಯ ನದಿಭಾಗದಿಂದ ಸಮುದ್ರಕ್ಕೆ ತೆರಳುವ ಸ್ಥಳದಲ್ಲಿ ಡ್ರೆಜ್ಜಿಂಗ್‌ಗೆ ಟೆಂಡರ್ ಕರೆಯಲು ಮುಖ್ಯಮಂತ್ರಿ ಶನಿವಾರ ಅನುಮೋದನೆ ನೀಡಿದ್ದಾರೆ. ಕುದ್ರು ಪ್ರದೇಶದ ಅಭಿವೃದ್ಧಿಗೆ 10 ಕೋ.ರೂ.ಅನುದಾನಕ್ಕೂ ಸಿಎಂ ಅನುಮೋದನೆ ನೀಡಿದ್ದಾರೆ. ಲಕ್ಷದ್ವೀಪಕ್ಕೆ ತೆರಳುವ ನಾವೆಗಳ ಜೆಟ್ಟಿ ನಿರ್ಮಾಣಕ್ಕೆ 65 ಕೋ.ರೂ. ವೆಚ್ಚದ ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿ ಇದೆ. ಬಾರ್ಜ್‌ಗೆ ಸಂಬಂಧಿಸಿದಂತೆ 29 ಕೋ.ರೂ.ಅನುದಾನ ದೊರೆಯುತ್ತಿದೆ. ಮೂರನೇ ಹಂತದ ಜೆಟ್ಟಿ ನಿರ್ಮಾಣ ಕಾಮಗಾರಿಯ ವೆಚ್ಚವನ್ನು 49.5 ಕೋ.ಗೆ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಈ ದಿನ 70 ಕೋ.ರೂ.ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು ಎಂದು ವೇದವ್ಯಾಸ ಕಾಮತ್ ಹೇಳಿದರು.