ಬಟ್ಟಂಪಾಡಿಯಲ್ಲಿ ಸೀವೇವ್ ಬ್ರೇಕರ್: ಸಚಿವ ಅಂಗಾರ

ಕಾಪು: ಸಮುದ್ರ ಕೊರತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇರಳದ ಕಾಸರಗೋಡಿನ ನೆಲ್ಲಿಕುನ್ನುವಿನಲ್ಲಿ ನಿರ್ಮಿಸಿದ ಸೀವೇವ್ ಬ್ರೇಕರ್ ಯೋಜನೆಯ ಮಾದರಿಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಬಟ್ಟಂಪಾಡಿಯಲ್ಲಿ ಅದನ್ನು ಪ್ರಾಯೋಗಿಕವಾಗಿ ಕಾರ್ಯಗತ ಮಾಡಲಾಗುವುದು ಎಂದು ಉಸ್ತುವಾರಿ ಸಚಿವ ಎಸ್. ಅಂಗಾರ ಹೇಳಿದರು.
ಸಮುದ್ರ ಕೊರೆತಕ್ಕೆ ಕಲ್ಲು ಹಾಕುವುದು ನಿರಂತರ ಕಾರ್ಯಕ್ರಮ. ಎಲ್ಲಾ ಸರ್ಕಾರಗಳು ಮಾಡುತ್ತಾ ಬಂದಿವೆ. ಈ ಕಾರ್ಯ ಅಪಹಾಸ್ಯಕ್ಕೊಳಗಾಗಿದ್ದು. ಶಾಶ್ವತ ಯೋಜನೆ ರೂಪಿಸಬೇಕೆಂಬ ಮುಖ್ಯಮಂತ್ರಿಗಳ ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿ ತಾಂತ್ರಿಕ ವರದಿಗಳು ಸಿದ್ಧವಾಗಿದೆ. ಸಾಧಕ ಬಾಧಕಗಳನ್ನು ಅಧ್ಯಯನ ಮಾಡಿ ಅತೀಹೆಚ್ಚು ಅಲೆಗಳ ಅಬ್ಬರವಿರುವ ವಾರದೊಳಗೆ ಅದಕ್ಕೆ ಪಾವತಿಯಾಗಬೇಕಾದ ಮೊತ್ತವನ್ನು ಪಾವತಿಸಲಾಗುವುದು. ಬಳಿಕ ಅಂದಾಜುಪಟ್ಟಿ ಸಿದ್ದಪಡಿಸಿ ಶೀಘ್ರ ಟೆಂಡರು ಆಹ್ವಾನಿಸಲಾಗುವುದು ಎಂದರು.
12 ಜೆಟ್ಟಿಗೆ ಬೇಡಿಕೆ: ಕಾರವಾರ, ಉಡುಪಿ ಮತ್ತು ಮಂಗಳೂರಿ ಸೇರಿ 12 ಜೆಟ್ಟಿಗಳ ಬೇಡಿಕೆಯಿದ್ದು, 2 ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಉಳಿದ 10ನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ ಎಂದು ಅಂಗಾರ ತಿಳಿಸಿದರು.
ಹೆಜಮಾಡಿ ಮೀನುಗಾರಿಕಾ ಬಂದರು ಕಾಮಗಾರಿ ಆರಂಭವಾಗಿದೆ. ಮೂರ್ನಾಲ್ಕು ಕಡೆ ಸಮುದ್ರ ತಡೆಗೋಡೆ ನಿರ್ಮಾಣದ ಬೇಡಿಕೆಯೂ ಬಂದಿದೆ. ಮೀನುಗಾರಿಕಾ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ 80 ಕೋಟಿ ರೂ. ಮಂಜೂರಾಗಿದೆ. ತಕ್ಷಣ ಅ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ತಡೆಗೋಡೆ ಕಾಮಗಾರಿಗೂ 45 ಕೋಟಿ ಅನುದಾನ ಮಂಜೂರಾಗಿದೆ.
21 ಕಿಲೋ ಲೀಟರ್ ಡೀಸೆಲ್ ಸಬ್ಸಿಡಿ ಬೇಡಿಕೆಯಿದ್ದು, 3000 ಕಿಲೋ ಲೀಟರ್ ಬಿಡುಗಡೆಯಾಗಿದೆ. ಬಾಕಿ ಬೇಡಿಕೆ ಬಿಡುಗಡೆಗೆ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವರೊಂದಿಗೆ ಮುಖ್ಯಮಂತ್ರಿಗಳು ಮಾತುಕತೆ ನಡೆಸಿದ್ದು, ಒಂದು ವಾರದಲ್ಲಿ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ನಾಡದೋಣಿಗಳ ಸೀಮೆ ಎಣ್ಣೆ ಸಮಸ್ಯೆ ಮುಂದುವರೆಯುವ ಕಾರಣ ಶಾಶ್ವತ ಪರಿಹಾರ ಕಲ್ಪಿಸುವ ಉದ್ಧೇಶದಿಂದ ಪೆಟ್ರೋಲ್ ಎಂಜಿನ್ ಅಳವಡಿಕೆ ಬಗ್ಗೆ ಹಲವು ಸುತ್ತಿನ ಸಭೆ ನಡೆಸಿ ಅದಕ್ಕೆ ತಗಲುವ ವೆಚ್ಚ ಸಹಿತ ಸಬ್ಸಿಡಿ ಭರಿಸುವ ಬಗ್ಗೆ ಚರ್ಚಿಸಲಾಗಿದೆ. ಮೀನುಗಾರರಿಗೆ ಕಡಿಮೆ ದರದಲ್ಲಿ ಎಂಜಿನ್ ಒದಗಿಸುವ ಚಿಂತನೆ ನಡೆದಿದೆ. ಬಳ್ಳಾರಿ ಜಿಲ್ಲೆಯಲ್ಲಿ ಒಳನಾಡ ಮೀನುಗಾರಿಕೆ ಅಭಿವೃದ್ಧಿಗೆ 103 ಕೋಟಿ ಯೋಜನೆ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಒಳನಾಡ ಮೀನುಗಾರರ ಸಮಾವೇಶ ಕುರಿತಂತೆ ಈ ಕುರಿತಂತೆ 16 ಅಥವಾ 17ರಂದು ಸಭೆ ನಡೆಸಿ ದಿನಾಂಕ ಗೊತ್ತುಪಡಿಸಲಾಗುವುದು ಎಂದು ತಿಳಿಸಿದರು.