ಬೆಂಗಳೂರು: ಕೃಷಿ ಮೇಳದಲ್ಲಿ ಜನ ಸಾಗರ, ತುಂಬಿ ತುಳುಕಿದ ಉಚಿತ ಬಸ್‍ಗಳು
ರೈತರು, ವಿದ್ಯಾರ್ಥಿಗಳಿಗೆ ಸರಕಾರದಿಂದ ಮಾಹಿತಿ

ಬೆಂಗಳೂರು, ನ. 5: ಸರಕಾರದ ವಿವಿಧ ಇಲಾಖೆಗಳು ಕೃಷಿ ವಿವಿಯ ಸಹಯೋಗದೊಂದಿಗೆ ಮಳಿಗೆಗಳನ್ನು ಸ್ಥಾಪಿಸಿಕೊಂಡು, ಕೃಷಿ ಮತ್ತು ಕೃಷಿ ಉತ್ಪನ್ನಗಳ ಬಗ್ಗೆ ರೈತರಿಗೆ, ವಿದ್ಯಾರ್ಥಿಗಳಿಗೆ ಸೇರಿ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಲಾಗುತ್ತಿತ್ತು. ಕೃಷಿ ಅಧ್ಯಯನದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವಂತೆ ಅವರಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗುತ್ತಿತ್ತು.
ಕೃಷಿ, ತೋಟಗಾರಿಕೆ, ಜಲಾನಯನ ಅಭಿವೃದ್ಧಿ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆಗಳು ಮಳಿಗೆಗಳನ್ನು ಸ್ಥಾಪಿಸಿಕೊಂಡಿದ್ದವು. ಜಲಾನಯನ ಅಭಿವೃದ್ಧಿ ಇಲಾಖೆಯು ನಿರ್ಮಿಸಿದ್ದ ‘ಜಲಾನಯನ ಅಭಿವೃದ್ದಿ ಮೂಲಕ ಬರಗಾಲವನ್ನು ತಡೆಯುವಿಕೆ ಕಾರ್ಯಕ್ರಮ’ದ ಪ್ರದರ್ಶನ ಘಟಕವು ಜನರ ಗಮನವನ್ನು ಸೆಳೆಯಿತು. ಅರಣ್ಯ ಇಲಾಖೆಯು ನರ್ಸರಿ ಮಳೆಗೆಯನ್ನು ಸ್ಥಾಪಿಸಿತ್ತು.
ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆಯ ಮಳಿಗೆಗಳಲ್ಲಿ ರೈತರಿಗೆ ದೊರೆಯುವ ಯೋಜನೆಗಳನ್ನು ತಿಳಿಸಲಾಗುತ್ತಿತ್ತು. ಮತ್ತೊಂದೆಡೆ ಖಾಸಗಿ ಬ್ಯಾಂಕ್‍ಗಳ ಮಳಿಗೆಗಳಲ್ಲಿ ರೈತರಿಗೆ ದೊರೆಯುವ ಹಣಕಾಸಿನ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು. ಯಂತ್ರೋಪಕರಣಗಳ ಮಳಿಗೆಯಲ್ಲಿ ರೈತರಿಗೆ ಸಬ್ಸಿಡಿ ದರದಲ್ಲಿ ಯಂತ್ರಗಳನ್ನು ಮಾರಲಾಗುತ್ತಿತ್ತು. ಸೌರಶಕ್ತಿಯನ್ನು ಬಳಸಿ, ಪಂಪ್ ಸೆಟ್ ನಿರ್ಮಾಣ ಮಾಡಲಾಗುತ್ತಿತ್ತು.
ಇನ್ನು ಕೃಷಿ ವಿವಿಯು ತರಕಾರಿ, ಸೊಪ್ಪು, ದಾನ್ಯಗಳ ಬೆಳೆಗಳ ಪ್ರದರ್ಶನಕ್ಕಾಗಿ ಮೂರ್ನಾಲ್ಕು ತಿಂಗಳುಗಳ ಹಿಂದೆಯೇ ತಯಾರಿ ನಡೆಸಲಾಗಿತ್ತು. ಹಾಗಾಗಿ ಬೆಳೆಗಳು ಚನ್ನಾಗಿ ಬೆಳೆದಿದ್ದು, ಜನರನ್ನು ಆಕರ್ಷಿಸಿದವು.
ಮಂತ್ರಿಗಳ ಆಗಮನ, ಸಾರ್ವಜನಿಕರ ಪ್ರವೇಶಕ್ಕೆ ತೊಡಕು: ಶನಿವಾರ ಸಂಜೆಯಾಗುತ್ತಿದ್ದಂತೆ ಮೇಳಕ್ಕೆ ಮುಖ್ಯಮಂತ್ರಿ ಸೇರಿ ಸಚಿವರು ಬಂದಿದ್ದರು. ಅವರು ಬರುವ ವೇಳೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಪೋಲಿಸರು ಸಾರ್ವಜನಿಕರನ್ನು ಕೃಷಿ ವಿವಿಯ ಹೆಬ್ಬಾಗಿಲಿನಲ್ಲೇ ತಡೆಹಿಡಿದರು. ಇದರಿಂದ ರಸ್ತೆಯಲ್ಲಿ ವಾಹಾನ ಸವಾರರು ಹೈರಾಣಾಗಿದ್ದರು. ಮೇಳಕ್ಕೆ ಮುಖ್ಯಂತ್ರಿಗಳು ಆಗಮಿಸಿದ ಅರ್ದಗಂಟೆಯ ಬಳಿಕವೂ ಸಾರ್ವಜನಿಕರಿಗೆ ಪ್ರವೇಶ ನೀಡಲಿಲ್ಲ. ಇದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಉಚಿತ ಪ್ರಯಾಣ ಬಸ್‍ಗಳಲ್ಲಿ ಜನಜಂಗುಳಿ: ಮೇಳಕ್ಕಾಗಿ ಅಗಮಿಸಿದ ಜನರಿಗೆ ಕೃಷಿ ವಿವಿಯ ಹೆಬ್ಬಾಗಿಲಿಲನಿಂದ ರಾಬು ರಾಜೇಂದ್ರ ಪ್ರಸಾದ್ ಸಮಾವೇಶ ಭವನದವರೆಗೆ ಸಾರ್ವಜನಿಕರನ್ನು ಸಾಗಿಸಲು ಬಸ್‍ಗಳನ್ನು ನಿಯೋಜನೆ ಮಾಡಲಾಗಿತ್ತು. ಶನಿವಾರ ರಜೆಯ ದಿನವಾದ್ದರಿಂದ ಈ ಬಸ್‍ಗಳಲ್ಲಿ ಮಿತಿ ಮೀರಿದ ಜನರನ್ನು ತುಂಬಿಕೊಂಡು ಹೋಗುವ ದೃಶ್ಯಗಳು ಕಂಡುಬಂದಿತು.







