ಸೆಲೆಬ್ರಿಟಿಗಳಿಗೆ ಟ್ವಿಟರ್ ಸಂದೇಶ ರವಾನೆಗೆ ಶುಲ್ಕ: ಮಸ್ಕ್

ನ್ಯೂಯಾರ್ಕ್, ನ.5: ಟ್ವಿಟರ್ ಸಂಸ್ಥೆಯನ್ನು ಖರೀದಿಸಿದ ಬಳಿಕ ಉದ್ಯೋಗ ಕಡಿತದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಎಲಾನ್ ಮಸ್ಕ್, ಸೆಲೆಬ್ರಿಟಿಗಳು ಅಥವಾ ಜನಪ್ರಿಯ ವ್ಯಕ್ತಿಗಳಿಗೆ ಸಂದೇಶ ರವಾನೆಗೆ ಶುಲ್ಕ ವಿಧಿಸುವ ವ್ಯವಸ್ಥೆ ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ.
ನೆಟ್‌ವರ್ಕ್‌ನಲ್ಲಿ ಅತ್ಯಂತ ಪ್ರಮುಖ ಟ್ವೀಟರ್‌ಗಳ ಮೇಲೆ ಟ್ವಿಟರ್ ತಂಡವೊಂದು ಗಮನ ಕೇಂದ್ರೀಕರಿಸಲಿದ್ದು, ಇನ್ನು ಮುಂದೆ ಬಳಕೆದಾರರು ಸೂಕ್ತ ಶುಲ್ಕ ಪಾವತಿಸಿ ಸೆಲೆಬ್ರಿಟಿಗಳಿಗೆ ಖಾಸಗಿ ಸಂದೇಶ ರವಾನಿಸಲು ಸಾಧ್ಯವಾಗಲಿದೆ. ಈ ಮಧ್ಯೆ, ಟ್ವಿಟರ್ ಮಾರಾಟವಾದ ಬಳಿಕ ಆ ವೇದಿಕೆಯ ಪ್ರಮುಖ ಜಾಹೀರಾತುದಾರರು ದೂರ ಸರಿದ ಕಾರಣ ಟ್ವಿಟರ್‌ನ ಆದಾಯದಲ್ಲಿ ಗಣನೀಯ ಇಳಿಕೆಯಾಗಿದೆ ಎಂದು ವರದಿಯಾಗಿದೆ.
ಕಾರ್ಯಕರ್ತರ ಗುಂಪಿನ ಒತ್ತಡಕ್ಕೆ ಮಣಿದ ಕೆಲವು ಜಾಹೀರಾತುದಾರರು ನಮ್ಮಿಂದ ದೂರ ಸರಿದ ಕಾರಣ ಆದಾಯದಲ್ಲಿ ಭಾರೀ ಇಳಿಕೆಯಾಗಿದೆ. ಅವರನ್ನು ಸಮಾಧಾನ ಪಡಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡಿದ್ದೇವೆ. ನಾವೀಗ ಗೊಂದಲದಲ್ಲಿದ್ದೇವೆ. ಕೆಲವರು ಅಮೆರಿಕದಲ್ಲಿ ವಾಕ್‌ಸ್ವಾತಂತ್ರ್ಯವನ್ನು ನಾಶಪಡಿಸಲು ಪ್ರಯತ್ನಿಸಿದ್ದಾರೆ ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ. ಈ ಮಧ್ಯೆ, ಟ್ವಿಟರ್ ವೇದಿಕೆಯಿಂದ ದೂರ ಸರಿಯುತ್ತಿರುವ ಪ್ರಮುಖ ಜಾಹೀರಾತುದಾರರನ್ನು ಹೆಸರಿಸಿ ಅವಮಾನ ಮಾಡಲೂ ಹಿಂಜರಿಯುವುದಿಲ್ಲ ಎಂದು ಮಸ್ಕ್ ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.







