ಕೆನ್ಯಾ : ಭೀಕರ ಬರಗಾಲದಿಂದ 1000ಕ್ಕೂ ಅಧಿಕ ಪ್ರಾಣಿಗಳ ಸಾವು

ನೈರೋಬಿ, ನ.5: ಕಳೆದ 40 ವರ್ಷಗಳಲ್ಲೇ ಅತ್ಯಂತ ಭೀಕರ ಬರಗಾಲದಿಂದ ಕೆನ್ಯಾದಲ್ಲಿ ಜನತೆ ಸಂಕಷ್ಟಕ್ಕೀಡಾಗಿರುವ ಜತೆಗೆ, ವನ್ಯಜೀವಿಗಳ ಸಹಿತ ಪ್ರಾಣಿಸಂಕುಲವನ್ನೂ ಕಂಗೆಡಿಸಿದೆ. ಕನಿಷ್ಟ 512 ಕಾಡುಪ್ರಾಣಿಗಳು, 381 ಝೀಬ್ರಾಗಳು, 205 ಆನೆಗಳು, 49 ಗ್ರೆವಿಯ ಝೀಬ್ರಾ ಮತ್ತು 51 ಎಮ್ಮೆಗಳು ನೀರಿನ ಕೊರತೆಯಿಂದ ಸಾವನ್ನಪ್ಪಿವೆ ಎಂದು ಸರಕಾರದ ಸಂಸ್ಥೆಗಳು ನಡೆಸಿದ ಅಧ್ಯಯನ ವರದಿ ತಿಳಿಸಿದೆ.
ಪರಂಪರೆ, ಪ್ರವಾಸೋದ್ಯಮ ಮತ್ತು ವನ್ಯಜೀವಿ ಸಚಿವಾಲಯ ಶುಕ್ರವಾರ ಬಿಡುಗಡೆಗೊಳಿಸಿದ ವರದಿ ಪ್ರಕಾರ, ಮಾಂಸಾಹಾರಿಗಳು ಸಾಮಾನ್ಯವಾಗಿ ಬರಗಾಲದಿಂದ ಕಡಿಮೆ ಪ್ರಭಾವಿತರಾಗಿದ್ದರೂ, ಪ್ರಾಣಿಗಳ ಜನಸಂಖ್ಯೆ ಕಡಿಮೆಯಾಗಿರುವುದನ್ನು ಇಲ್ಲಿ ಗಮನಿಸಬೇಕು. 2022ರ ಫೆಬ್ರವರಿ-ಅಕ್ಟೋಬರ್ ನಡುವಿನ ಅವಧಿಯನ್ನು ಗಮನಿಸಿದರೆ ದಿನಗಳು ಕಳೆದಂತೆ ಬರವು ಉಲ್ಬಣಗೊಳ್ಳುತ್ತಲೇ ಇದೆ. ಹೆಚ್ಚು ಬಾಧಿತ ಪರಿಸರ ವ್ಯವಸ್ಥೆಗಳಲ್ಲಿ ತಕ್ಷಣ ನೀರು ಮತ್ತು ಸಾಲ್ಟ್‌ಲಿಕ್ಸ್(ಪ್ರಾಣಿಗಳು ತಮ್ಮ ಪೋಷಣೆಯನ್ನು ಪೂರೈಸಲು ಬಳಸುವ ಖನಿಜ ಲವಣಗಳ ಸಂಗ್ರಹವಾಗಿದ್ದು , ಆಹಾರದಲ್ಲಿ ಸಾಕಷ್ಟು ಖನಿಜಗಳನ್ನು ಖಾತರಿ ಪಡಿಸುತ್ತದೆ) ಒದಗಿಸುವ ಅಗತ್ಯವಿದೆ . ಕೆನ್ಯಾದ ಅನೆ ಜನಸಂಖ್ಯೆಯ 65%ದಷ್ಟು ಆನೆಗಳಿರುವ ಅಂಬೋಸೆಲಿ, ತ್ಸಾವೊ ಮತ್ತು ಲೈಕಿಪಿಯ-ಸಂಬುರು ಪ್ರದೇಶವು ಬರಗಾಲದಿಂದ ಅತ್ಯಂತ ಹೆಚ್ಚು ಹಾನಿಯಾದ ಪ್ರದೇಶದಲ್ಲಿ ಸೇರಿದೆ ಎಂದು ವರದಿ ಹೇಳಿದೆ.
ಪ್ರವಾಸೋದ್ಯಮವು ಕೆನ್ಯಾದ 3ನೇ ಅತೀ ದೊಡ್ಡ ವಿದೇಶಿ ವಿನಿಮಯ ಗಳಿಕೆಯಾಗಿದ್ದು ಈ ವರ್ಷ ಪ್ರವಾಸೋದ್ಯಮ ಕ್ಷೇತ್ರದ ಆದಾಯ 1.42 ಶತಕೋಟಿ ಡಾಲರ್‌ಗೆ ಹೆಚ್ಚುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.





