ಬೆಂಗಳೂರು: ‘ಮಸೀದಿ ದರ್ಶನ' ಕಾರ್ಯಕ್ರಮದಲ್ಲಿ ಸರ್ವರ ಸಂಗಮ

ಬೆಂಗಳೂರು,(Bengaluru ) ನ.5: ನಗರದ ಜುಮಾ ಮಸೀದಿ ಟ್ರಸ್ಟ್ ಬೋರ್ಡ್ ಆಡಳಿತ ಸಮಿತಿಯ ನೇತೃತ್ವದಲ್ಲಿ ‘ಮುಹಮ್ಮದ್ ಫಾರ್ ಮ್ಯಾನ್ ಕೈಂಡ್’ ಸಹಯೋಗದೊಂದಿಗೆ ಮಿಲ್ಲರ್ಸ್ ರಸ್ತೆಯಲ್ಲಿರುವ ಮಸ್ಜಿದ್-ಎ-ಖಾದ್ರಿಯಾ ಏರ್ಪಡಿಸಿದ್ದ ‘ಮಸೀದಿ ದರ್ಶನ’ ಕಾರ್ಯಕ್ರಮದಲ್ಲಿ ಚಿಂತಕರು, ವಿಚಾರವಾದಿಗಳು, ಹೋರಾಟಗಾರರು, ಮಹಿಳೆಯರು ಸೇರಿದಂತೆ ಅನೇಕ ಸಂಖ್ಯೆಯಲ್ಲಿ ಮುಸ್ಲಿಮೇತರರು ಪಾಲ್ಗೊಂಡಿದ್ದರು.
ನಮಾಝ್‌ಗೆ ಕರೆಯುವ ಅಝಾನ್, ಪ್ರಾರ್ಥನೆಗೆ ಮುನ್ನ ನೆರವೇರಿಸುವ ವುಝೂ (ಕೈ, ಕಾಲು, ಮುಖ ಸ್ವಚ್ಛಗೊಳಿಸುವ ಪ್ರಕ್ರಿಯೆ), ನಮಾಝ್ ಮಾಡುವ ಹಾಲ್, ಖುತ್ಬಾ (ಪ್ರವಚನ) ನೀಡುವ ಸ್ಥಳ, ಗ್ರಂಥಾಲಯ ಸೇರಿ ಎಲ್ಲ ಮಾಹಿತಿ ಪಡೆದರು.
ಹೋರಾಟಗಾರ ಭಾಸ್ಕರ್ ಪ್ರಸಾದ್ ಮಾತನಾಡಿ, ಮುಸ್ಲಿಮರು ಮಸೀದಿಗಳಲ್ಲಿ ರಾಷ್ಟ್ರದ್ರೋಹಿ ಚಟುವಟಿಕೆಗಳನ್ನು ಮಾಡುತ್ತಾರೆ ಎಂದು ಇಲ್ಲಸಲ್ಲದ ಆರೋಪ ಮಾಡುವವರಿಗೆ ಈ ಕಾರ್ಯಕ್ರಮದಿಂದ ತಕ್ಕ ಉತ್ತರ ಸಿಕ್ಕಿದೆ. ಮುಸ್ಲಿಮರು ಏಕ ದೇವರನ್ನು ಮಾತ್ರ ಆರಾಧನೆ ಮಾಡುತ್ತಾರೆ ವಿನಃ, ಇತರರ ನಂಬಿಕೆ, ಭಾವನೆಗಳನ್ನು ನಿಂದಿಸುವುದಿಲ್ಲ ಎಂದರು.
ಸಂಘಪರಿವಾರದ ಕಾರ್ಯಕರ್ತರು, ಮುಖಂಡರು ಇಲ್ಲಿ ನೇರವಾಗಿ ಪಾಲ್ಗೊಳ್ಳಬಹುದು. ಮುಸ್ಲಿಮರ ಮೇಲಿರುವ ಗೊಂದಲಗಳನ್ನು ಬಗೆಹರಿಸಿಕೊಳ್ಳಬೇಕು ಎಂದ ಅವರು, ಸೌಹಾರ್ದ ಸಮಾಜವನ್ನು ಕಟ್ಟುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ನುಡಿದರು.
ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಕಾರ್ಯದರ್ಶಿ ಅಕ್ಬರ್ ಅಲಿ ಮಾತನಾಡಿ, ಎಲ್ಲರೂ ಇಂತಹ ಕಾರ್ಯಕ್ರಮಕ್ಕೆ ಬರಬೇಕು. ಯಾರಿಗೆ ಏನು ಪ್ರಶ್ನೆ ಇದೆ, ಸಂದೇಹ ಇದೆ ಕೇಳಿ ಚರ್ಚೆ ಮಾಡಬಹುದು. ಮಸೀದಿಯ ಅಪನಂಬಿಕೆ ದೂರ ಆಗಬೇಕು. ಮಸೀದಿ ಎಂಬುದು ಮುಸ್ಲಿಮರ ಅಸ್ಮಿತೆಯಾಗಿದೆ. ಮಸೀದಿಯಲ್ಲಿ ಏನೆಲ್ಲ ನಡೆಯುತ್ತೆ ಅನ್ನುವುದು ಹೊರಗೂ ಗೊತ್ತಾಗಬೇಕು. ಇಸ್ಲಾಮಿನ ಸಹೋದರತ್ವ ಸಂದೇಶ ಪಾಲನೆಯಾಗಬೇಕೆಂಬುದೇ ಉದ್ದೇಶವಾಗಿದೆ ಎಂದು ವಿವರಿಸಿದರು.
ಜುಮಾ ಮಸೀದಿ ಟ್ರಸ್ಟ್ ಬೋರ್ಡ್ ಆಡಳಿತ ಸಮಿತಿಯ ಕಾರ್ಯದರ್ಶಿ ಉಸ್ಮಾನ್ ಶರೀಫ್ ಮಾತನಾಡಿ, ಜನರ ನಡುವೆ ಅಪನಂಬಿಕೆ, ಸಂದೇಹಗಳನ್ನು ದೂರ ಮಾಡುವುದು ಕಾಲದ ಅನಿವಾರ್ಯ. ಪರಸ್ಪರ ಅರಿವು ನಮ್ಮಲ್ಲಿ ಸೌಹಾರ್ದತೆಯನ್ನು ಗಟ್ಟಿಗೊಳಿಸುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಿ ಎಂದು ಅವರು ಮನವಿ ಮಾಡಿದರು.
ಮಸೀದಿಯಲ್ಲಿ ಏರ್ಪಡಿಸಲಾಗಿದ್ದಪ್ರಶ್ನೋತ್ತರ ಸಂವಾದ ವೇಳೆ ಹಲವಾರು ವೀಕ್ಷಕರು, ಮಸೀದಿಯ ಒಳ ಆವರಣ ಹೇಗಿರುತ್ತದೆ, ಅಲ್ಲಿ ಏನೆಲ್ಲಾ ಮಾಡುತ್ತಾರೆಂಬ ಕುತೂಹಲ ಇತ್ತು. ಕಾರ್ಯಕ್ರಮ ಉಪಯುಕ್ತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವೈದ್ಯರಾದ ಡಾ.ತಾಹಾ ಮತೀನ್, ಮುಫ್ತಿ ಅಲಿ ಮುಹಮ್ಮದ್ ಖಾದ್ರಿ, ಅಬ್ದುಲ್ ಹಮೀದ್, ಜಮಾಅತೆ ಇಸ್ಲಾಮೀ ಹಿಂದ್‌ನ ಮುಹಮ್ಮದ್ ನವಾಝ್, ಫಿರೋಝ್ ಖಾನ್, ಅಫ್ಸರ್ ಅಹ್ಮದ್, ನವೀದ್ ಇರ್ಫಾನ್, ತೌಸೀಫ್ ಅಹ್ಮದ್ ಹಾಜರಿದ್ದರು.
''ಯಾವುದೇ ಮಸೀದಿಗೆ ಯಾರು ಬೇಕಾದರೂ ಹೋಗಿ ಮುಸ್ಲಿಂ ಧರ್ಮದ ಆಚಾರ, ವಿಚಾರಗಳನ್ನು ನೋಡಲು ಅವಕಾಶ ಕಲ್ಪಿಸಿರುವುದು ಒಳ್ಳೆಯ ಬೆಳವಣಿಗೆ. ಇಂತಹ ಕಾರ್ಯಕ್ರಮಗಳಿಂದ ಸೌಹಾರ್ದ ಹೆಚ್ಚಾಗಲಿದೆ.''
► -ಪೀಟರ್ ಮಚಾದೋ, ಆರ್ಚ್ ಬಿಷಪ್ ಬೆಂಗಳೂರು
-------------------------------------------------------
ಒಳ್ಳೆಯ ಪ್ರಯತ್ನ: ಆಲ್ಟ್ ನ್ಯೂಸ್, ಸಹ ಸಂಸ್ಥಾಪಕ ಮುಹಮ್ಮದ್ ಝುಬೇರ್
''ಕೆಲ ಕ್ಷೇತ್ರಗಳನ್ನು ನಿಗೂಢವಾಗಿಯೇ ಇಟ್ಟರೆ, ಅವು ಜನರಲ್ಲಿನ ಸಾಮರಸ್ಯವನ್ನು ಒಡೆಯುವ ಪಿತೂರಿ ನಡೆಸುವವರಿಗೆ ಸಹಕಾರಿಯಾಗುತ್ತವೆ. ಅದನ್ನು ಹೋಗ ಲಾಡಿಸಲು, ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂದೇಹಗಳ ಗೋಡೆಗಳನ್ನು ಕೆಡವಿ ಹೃದಯಗಳನ್ನು ಬೆಸೆಯುವ ಪ್ರಯತ್ನ ಒಳ್ಳೆಯದು'' ಎಂದು ತಿಳಿಸಿದರು.






.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)

