ನೆದರ್ ಲ್ಯಾಂಡ್ಸ್ ವಿರುದ್ಧ ದ. ಆಫ್ರಿಕಾಕ್ಕೆ ಸೋಲು: ಸೆಮಿ ಫೈನಲ್ ಪ್ರವೇಶಿಸಿದ ಭಾರತ!
ಕ್ವಾರ್ಟರ್ ಫೈನಲ್ ಸ್ವರೂಪ ಪಡೆದ ಪಾಕ್-ಬಾಂಗ್ಲಾ ಪಂದ್ಯ

ಅಡಿಲೇಡ್: ಟ್ವೆಂಟಿ-20 ವಿಶ್ವಕಪ್‌ನಲ್ಲಿ ರವಿವಾರ ನಡೆದ ಸೂಪರ್-12 ಪಂದ್ಯದಲ್ಲಿ ನೆದರ್ ಲ್ಯಾಂಡ್ಸ್ ತಂಡವು ದಕ್ಷಿಣ ಆಫ್ರಿಕಾವನ್ನು 13 ರನ್‌ಗಳ ಅಂತರದಿಂದ ಮಣಿಸಿ ಟೂರ್ನಿಯಿಂದ ಹೊರ ಹಾಕಿದೆ. ಈ ಫಲಿತಾಂಶದೊಂದಿಗೆ ಭಾರತವು ಗ್ರೂಪ್-2ರಲ್ಲಿ ಅಗ್ರ ಸ್ಥಾನ ಪಡೆದು ಸೆಮಿ ಫೈನಲಿಗೆ ಅರ್ಹತೆ ಪಡೆದಿದೆ.
ಇದೀಗ ಗ್ರೂಪ್-2ರಲ್ಲಿ ಎರಡನೇ ಸ್ಥಾನ ಪಡೆದು ಸೆಮಿ ಫೈನಲ್ ತಲುಪಲು ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಈ ಎರಡು ತಂಡಗಳು ಇಂದು ಮುಖಾಮುಖಿಯಾಗುತ್ತಿವೆ.
ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತವು ಆರು ಅಂಕಗಳನ್ನು ಹೊಂದಿದೆ. ಇಂದು ತನ್ನ ಕೊನೆಯ ಸೂಪರ್-12 ಪಂದ್ಯದಲ್ಲಿ ಝಿಂಬಾಬ್ವೆಯನ್ನು ಮೆಲ್ಬೋರ್ನ್‌ನಲ್ಲಿ ಎದುರಿಸುವ ಮೊದಲೇ ಸೆಮಿ ಫೈನಲ್ ಗೆ ತಲುಪಿದೆ.
ಗೆಲುವಿಗಾಗಿ 159 ರನ್‌ಗಳನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಡಚ್ ವೇಗದ ಬೌಲರ್ ಬ್ರಾಂಡನ್ ಗ್ಲೋವರ್ ಎರಡು ಓವರ್‌ಗಳಲ್ಲಿ 9 ರನ್ ಗೆ 3 ವಿಕೆಟ್ ಪಡೆದು ದಕ್ಷಿಣ ಆಫ್ರಿಕಾಕ್ಕೆ ಆಘಾತಕಾರಿ ಸೋಲುಣಿಸಿದರು.
ಆರಂಭಿಕರಾದ ಕ್ವಿಂಟನ್ ಡಿ ಕಾಕ್ (13 ರನ್) ಹಾಗೂ ಟೆಂಬಾ ಬವುಮಾ (20 ರನ್) ಅವರು 39 ರನ್ ಗಳಿಸಿದ್ದಾಗ ಆರು ಓವರ್‌ಗಳೊಳಗೆ ಔಟಾಗುವುದರೊಂದಿಗೆ ದಕ್ಷಿಣ ಆಫ್ರಿಕಾ ಆರಂಭದಲ್ಲೇ ಎಡವಿತು.
ರಿಲಿ ರೊಸ್ಸೊ 25 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ಗ್ಲೋವರ್ ಯಶಸ್ವಿ ಬೌಲರ್ ಎನಿಸಿಕೊಂಡಿದ್ದು, ಫ್ರೆಡ್ ಕ್ಲಾಸೆನ್(2-20) ಹಾಗೂ ಬಾಸ್ ಡಿ ಲೀಡ್(2-25) ತಲಾ ಎರಡು ವಿಕೆಟ್ ಪಡೆದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ನೆದರ್ ಲ್ಯಾಂಡ್ಸ್ ತಂಡ ಕಾಲಿನ್ ಅಕರ್‌ಮನ್ ಅವರ ಅಜೇಯ 41 ರನ್‌ಗಳ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು.