ಏಳು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮತ ಎಣಿಕೆ: 4ರಲ್ಲಿ ಬಿಜೆಪಿ, 1ರಲ್ಲಿ ಆರ್ ಜೆಡಿಗೆ ಆರಂಭಿಕ ಮುನ್ನಡೆ

ಹೊಸದಿಲ್ಲಿ: ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಮತ ಎಣಿಕೆ ರವಿವಾರ ಬೆಳಗ್ಗೆ ಆರಂಭವಾಗಿದೆ. ಬಿಜೆಪಿ ನಾಲ್ಕರಲ್ಲಿ ಹಾಗೂ ಆರ್ ಜೆಡಿ 1 ಸ್ಥಾನಗಳಲ್ಲಿ ಆರಂಭಿಕ ಮುನ್ನಡೆ ಸಾಧಿಸಿವೆ.
ಮೊದಲ ಕೆಲವು ಸುತ್ತಿನ ಮತ ಎಣಿಕೆಯ ನಂತರ ಉತ್ತರ ಪ್ರದೇಶದ ಗೋಲ ಗೋಕ್ರನಾಥ, ಹರ್ಯಾಣದ ಆದಂಪುರ, ಬಿಹಾರದ ಗೋಪಾಲ್‌ಗಂಜ್ ಹಾಗೂ ಒಡಿಶಾದ ಧಮ್‌ನಗರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಬಿಹಾರದ ಮೊಕಾಮಾದಲ್ಲಿ ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ ಮುಂದಿದೆ.
ತೆಲಂಗಾಣದ ಮುನುಗೋಡಿನಲ್ಲಿ ಕೆ. ಚಂದ್ರಶೇಖರ್ ರಾವ್ ಅವರ ತೆಲಂಗಾಣ ರಾಷ್ಟ್ರೀಯ ಸಮಿತಿ ಹಾಗೂ ಮುಂಬೈನ ಅಂಧೇರಿ ಪೂರ್ವ ಕ್ಷೇತ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ ಗೆಲುವಿನ ನಿರೀಕ್ಷೆಯಲ್ಲಿವೆ.
ಉಪ ಚುನಾವಣೆಗೆ ಮೊದಲು ಏಳು ಸ್ಥಾನಗಳ ಪೈಕಿ ಬಿಜೆಪಿ ಮೂರು, ಕಾಂಗ್ರೆಸ್ ಎರಡು, ಶಿವಸೇನೆ ಹಾಗೂ ಆರ್‌ಜೆಡಿ ತಲಾ ಒಂದನ್ನು ಹೊಂದಿದ್ದವು. ಬಿಹಾರದಲ್ಲಿ ಎರಡು ಸ್ಥಾನಗಳು, ಉತ್ತರಪ್ರದೇಶ, ಹರ್ಯಾಣ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಒಡಿಶಾದಲ್ಲಿ ತಲಾ ಒಂದರಲ್ಲಿ ಉಪ ಚುನಾವಣೆ ನಡೆದಿತ್ತು.





