ಅತ್ಯಾಚಾರ ಆರೋಪ: ಶ್ರೀಲಂಕಾದ ಕ್ರಿಕೆಟಿಗ ದನುಷ್ಕಾ ಗುಣತಿಲಕ ಸಿಡ್ನಿಯಲ್ಲಿ ಬಂಧನ

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ರಾಷ್ಟ್ರೀಯ ತಂಡದಲ್ಲಿದ್ದ ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕ ಅವರನ್ನು ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ತಂಡದ ಮೂಲಗಳು ರವಿವಾರ ತಿಳಿಸಿವೆ.
ನವೆಂಬರ್ 2 ರಂದು ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ತನಿಖೆಯ ನಂತರ 31 ವರ್ಷದ ಗುಣತಿಲಕ ಅವರನ್ನು ರವಿವಾರ ನಸುಕಿನಲ್ಲಿ ಬಂಧಿಸಿ ಸಿಡ್ನಿ ನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
"ದನುಷ್ಕ ಗುಣತಿಲಕ ಅವರನ್ನು ಅತ್ಯಾಚಾರ ಆರೋಪದಡಿ ಬಂಧಿಸಲಾಗಿದೆ. ಶ್ರೀಲಂಕಾ ತಂಡವು ಗುಣತಿಲಕರಿಲ್ಲದೆ ಆಸ್ಟ್ರೇಲಿಯಾವನ್ನು ತೊರೆದಿದೆ" ಎಂದು ಶ್ರೀಲಂಕಾ ತಂಡದ ಆಪ್ತ ಮೂಲವು ಪಿಟಿಐಗೆ ತಿಳಿಸಿದೆ.
ಇಂಗ್ಲೆಂಡ್ ವಿರುದ್ಧ ಸೋತಿದ್ದ ಶ್ರೀಲಂಕಾ ತಂಡ ಟೂರ್ನಿಯಿಂದ ಹೊರಬಿದ್ದಿತ್ತು.
ಎಡಗೈ ಬ್ಯಾಟರ್ ಗುಣತಿಲಕ ಟ್ವೆಂಟಿ-20 ವಿಶ್ವಕಪ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಆಡಿದ್ದರು. ಶೂನ್ಯಕ್ಕೆ ಔಟಾಗಿದ್ದರು.
ನಂತರ, ಲಂಕಾ ತಂಡವು ಸೂಪರ್ 12 ಹಂತಕ್ಕೆ ಅರ್ಹತೆ ಪಡೆದಾಗಲೂ ಗುಣತಿಲಕ ಅವರು ಗಾಯದ ಕಾರಣ ಪಂದ್ಯಾವಳಿಯಿಂದ ಹೊರಗುಳಿದಿದ್ದರು. ಲಂಕಾ ತಂಡವು ಗುಂಪು 1ರಲ್ಲಿ ನಾಲ್ಕನೇ ಸ್ಥಾನ ಗಳಿಸಿದೆ.
"ಕಳೆದ ವಾರ ಸಿಡ್ನಿಯ ಪೂರ್ವದಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ತನಿಖೆಯ ನಂತರ ಲೈಂಗಿಕ ಅಪರಾಧಗಳ ಪತ್ತೆ ತಂಡವು ಶ್ರೀಲಂಕಾದ ಪ್ರಜೆಯ ಮೇಲೆ ಆರೋಪ ಹೊರಿಸಿದೆ. ಈ ವಾರದ ಆರಂಭದಲ್ಲಿ ರೋಸ್ ಬೇಯಲ್ಲಿರುವ ನಿವಾಸದಲ್ಲಿ 29 ವರ್ಷದ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು’’ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸರು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ.
"ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ನ ಮೂಲಕ ಹಲವಾರು ದಿನಗಳವರೆಗೆ ಸಂವಹನ ನಡೆಸಿದ ನಂತರ ಮಹಿಳೆಯು ಪುರುಷನನ್ನು ಭೇಟಿಯಾದಳು. ನಂತರ 2 ನವೆಂಬರ್ 2022 ರ ಸಂಜೆ ಆತ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ'' ಎಂದು ಆರೋಪಿಸಲಾಗಿದೆ.