ಕಲ್ಲಾಪು | ಸ್ಕೂಟರ್ ಗೆ ಲಾರಿ ಢಿಕ್ಕಿ: ಇಬ್ಬರು ಮೃತ್ಯು, ಮಕ್ಕಳಿಬ್ಬರು ಗಂಭೀರ

ಮಂಗಳೂರು, ನ.6: ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಬಳಿ ಲಾರಿಯೊಂದು ಸ್ಕೂಟರ್‌ಗೆ ಢಿಕ್ಕಿ(Accident) ಹೊಡೆದ ಪರಿಣಾಮ ಸ್ಕೂಟರ್ ಸವಾರ ಸಹಿತ ಇಬ್ಬರು ಮೃತಪಟ್ಟು, ಮಕ್ಕಳಿಬ್ಬರು ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.
ಮೃತಪಟ್ಟವರನ್ನು ಜಪ್ಪಿನಮೊಗರು ತಂದೊಳಿಗೆ ನಿವಾಸಿ ಗಂಗಾಧರ (45)ಮತ್ತು ಕೊಣಾಜೆ ಸಮೀಪದ ಪಜೀರ್ ನಿವಾಸಿ ನೇತ್ರಾವತಿ(48)ಎಂದು ಗುರುತಿಸಲಾಗಿದೆ. ನೇತ್ರಾವತಿಯ ಪುತ್ರಿ ಮೋಕ್ಷ (4) ಹಾಗೂ ನೇತ್ರಾವತಿಯ ಅಕ್ಕನ ಮಗ ಜ್ಞಾನೇಶ್ (6) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರದ ಪಂಪ್‌ವೆಲ್‌ನಿಂದ ತೊಕ್ಜೊಟ್ಟು ಕಡೆಗೆ ಚಲಿಸುತ್ತಿದ್ದ ಸ್ಕೂಟರ್ ಕಲ್ಲಾಪು ಬಳಿ ತಲುಪಿದಾಗ ಇಲ್ಲಿನ ಖಾಸಗಿ ಮಾರುಕಟ್ಟೆಯಿಂದ ರಾ.ಹೆ.ಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಿಸಿಕೊಂಡು ಬಂದ ಲಾರಿ ಢಿಕ್ಕಿ ಹೊಡೆದಿದೆ. ಇದರಿಂದ ಸ್ಕೂಟರ್‌ನಲ್ಲಿದ್ದ ನಾಲ್ವರು ರಸ್ತೆಗೆ ಎಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡಿದ್ದ ಗಂಗಾಧರ ಮತ್ತು ನೇತ್ರಾವತಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಲಾರಿ ಚಾಲಕ ಹನೀಫ್ ವಿರುದ್ಧ ಮಂಗಳೂರು ಸಂಚಾರ ದಕ್ಷಿಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಮೈಸೂರು | ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶ: ಮೂವರು ರೈತರು ಮೃತ್ಯು