ಮಂಗಳೂರು: ನೇಕಾರರ ಸಮಾವೇಶ-ಪ್ರತಿಭಾ ಪುರಸ್ಕಾರ

ಮಂಗಳೂರು : ಜಾಗತೀಕರಣ, ಖಾಸಗೀಕರಣದ ಹೊಡೆತಕ್ಕೆ ಸಿಲುಕಿದ ನೇಕಾರ ಸಮುದಾಯವು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಹಾಗಾಗಿ ಈ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಪಣತೊಡಬೇಕಾಗಿದೆ ಎಂದು ಬಾಗಲಕೋಟೆಯ ಶ್ರೀಗುರು ಸಿದ್ಧೇಶ್ವರ ಮಠದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಹೇಳಿದರು.
ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ವತಿಯಿಂದ ನಗರದ ದೇವಾಂಗ ಭವನದಲ್ಲಿ ರವಿವಾರ ನಡೆದ ನೇಕಾರರ ಸಮಾವೇಶ, ಪ್ರತಿಭಾ ಪುರಸ್ಕಾರ, ಹಿರಿಯ ನಾಗರಿಕರಿಗೆ ಸನ್ಮಾನ, ಮಹಿಳೆಯರ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನೇಕಾರರು ಮಾನವ ಜನಾಂಗದ ಅವಿಭಾಜ್ಯ ಅಂಗವಾಗಿದ್ದಾರೆ. ಊಟ ಇಲ್ಲದೆ ಮನುಷ್ಯ ಬದುಕಬಹುದು, ಆದರೆ ಬಟ್ಟೆ ಇಲ್ಲದೆ ಇರಲಾಗದು. ಇಂತಹ ಶ್ರಮ ಜೀವಿಗಳಾದ ನೇಕಾರ ಸಮಾಜದ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕೆಲಸಮಾಡಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿ ಸಮಾವೇಶ ಉದ್ಘಾಟಿಸಿದರು. ಈ ಸಂದರ್ಭ ನೆಲಮಂಗಲ ಶ್ರೀ ಗಾಯತ್ರಿ ಪೀಠದ ಪೀಠಾಧ್ಯಕ್ಷ ದಯಾನಂದ ಪುರಿ ಸ್ವಾಮೀಜಿ, ದೊಡ್ಡ ಬಳ್ಳಾಪುರ ಪುಷ್ಪಾಂಡಜಿ ಮಹರ್ಷಿ ಆಶ್ರಮದ ದಿವ್ಯ ಜ್ಞಾನಾನಂದಗಿರಿ ಸ್ವಾಮೀಜಿ, ಗುರು ಬಸವ ಸ್ವಾಮೀಜಿ, ಮಾಜಿ ಉಸ್ತುವಾರಿ ಸಚಿವ ಕೃಷ್ಣ ಜೆ ಪಾಲೇಮಾರ್, ಶಾಸಕ ಡಿ.ವೇದವ್ಯಾಸ ಕಾಮತ್, ರಾಜ್ಯ ಸಭಾ ಸದಸ್ಯ ಕೆ.ನಾರಾಯಣ, ಕರ್ನಾಟಕ ರಾಜ್ಯ ನೇಕಾರ ಸಂಘ ಒಕ್ಕೂಟದ ರಾಜಾಧ್ಯಕ್ಷ ಬಿ.ಎಸ್. ಸೋಮಶೇಖರ್, ಕಾರ್ಯಾಧ್ಯಕ್ಷ ರಘು ಎಸ್. ಶೆಟ್ಟಿಗಾರ್, ನೇಕಾರ ವಾಣಿ ಸಂಪಾದಕ ಲಿಂಗರಾಜು, ವಿಧಾನ ಪರಿಷತ್ ಸದಸ್ಯರಾದ ಕೇಶವ ಪ್ರಸಾದ್, ಪ್ರತಾಪ ಸಿಂಹ ನಾಯಕ್, ಮಂಗಳೂರು ದೇವಾಂಗ ಸಮಾಜದ ಅಧ್ಯಕ್ಷ ದುರ್ಗೇಶ್ ಚೆಟ್ಟಿಯಾರ್, ಚಿತ್ರನಟ ಪುಷ್ಪರಾಜ್ ಬೊಳ್ಳೂರು, ಕಾರ್ಪೊರೇಟರ್ ಗಣೇಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.
ಶಾಂತಾ ರವೀಂದ್ರ ಸ್ವಾಗತಿಸಿದರು. ಎಂ. ಜಯರಾಮ್ ಶೆಟ್ಟಿಗಾರ್ ವಂದಿಸಿದರು. ಡಾ.ಮೀನಾಕ್ಷಿ ರಾಮಚಂದ್ರ ಹಾಗೂ ಸತ್ಯ ನಾರಾಯಣ ಕೆ. ಕಾರ್ಯಕ್ರಮ ನಿರೂಪಿಸಿದರು.
*ನೇಕಾರ ಸಮುದಾಯದ ವಿವಿಧ ಬೇಡಿಕೆಗಳ ಪಟ್ಟಿಯನ್ನು ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನಪ್ರತಿನಿಧಿಗಳಿಗೆ ನೀಡಲಾಯಿತು. ನೇಕಾರ ಸಮುದಾಯದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಬೇಕು. ಕೈಮಗ್ಗ, ಫವರ್‌ಲೂಮ್ ನೇಕಾರರಿಗೆ ಸಬ್ಸಿಡಿಯ ಜೊತೆ ಆಧುನಿಕ ಯಂತ್ರಗಳನ್ನು ನೀಡಬೇಕು. ನೇಕಾರರ ಕೌಶಲಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಶಾಲೆಗಳ ಸಮವಸ್ತ್ರದ ಖರೀದಿ ಸಮಯದಲ್ಲಿ ನೇಕಾರರ ಸಂಘವನ್ನು ಬಳಸಿಕೊಳ್ಳುವ ಮೂಲಕ ಸಮುದಾಯಕ್ಕೆ ಶಕ್ತಿ ತುಂಬಬೇಕು. ರಾಜ್ಯ, ಜಿಲ್ಲಾ, ತಾಲೂಕುಗಳಲ್ಲಿ ನೇಕಾರರ ಭವನಗಳನ್ನು ಸ್ಥಾಪಿಸಬೇಕು ಎಂಬ ಬೇಡಿಕೆಹಳನ್ನು ಈಡೇರಿಸಬೇಕು ಎಂದು ಆಗ್ರಹಿಸಲಾಯಿತು.







